ನವದೆಹಲಿ:ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತ ಅವರನ್ನು ಸುಪ್ರೀಂ ಕೋರ್ಟ್‍ಗೆ ಪದೋನ್ನತಿಗೊಳಿಸುವ ಸುಪ್ರೀಂ ಕೋರ್ಟ್ ಶಿಫಾರಸನ್ನು ಸರಕಾರ ಅನುಮೋದಿಸಿದೆ ಎಂದು ತಿಳಿದು ಬಂದಿದೆಯೆಂದು indianexpress.com ವರದಿ ಮಾಡಿದೆ.
ಸದ್ಯ ಈ ಕುರಿತಾದ ಫೈಲ್ ರಾಷ್ಟ್ರಪತಿಗಳ ಮುಂದೆ ಇದ್ದು ಅವರ ಅಂಕಿತಕ್ಕಾಗಿ ಎದುರು ನೋಡಲಾಗುತ್ತಿದೆ. ರಾಷ್ಟ್ರಪತಿಗಳ ಅಂಗೀಕಾರ ದೊರೆತ ಬೆನ್ನಲ್ಲೇ ಮುಂದಿನ ವಾರ ಜಸ್ಟಿಸ್ ದತ್ತಾ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಬಹುದು.
ಮಾಜಿ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರ ಅಧಿಕಾರಾವಧಿ ವೇಳೆ ಕೊಲೀಜಯಂ ಜಸ್ಟಿಸ್ ದತ್ತಾ ಅವರ ಹೆಸರನ್ನು ಸೆಪ್ಟೆಂಬರ್ 26 ರಂದು ಶಿಫಾರಸು ಮಾಡಿತ್ತು. ಆದರೆ ಈ ಫೈಲ್ ಅನ್ನು ಸರಕಾರ ಅನುಮೋದಿಸದೇ ಇದ್ದುದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಫೆಬ್ರವರಿ 9, 1965 ರಂದು ಜನಿಸಿದ ದತ್ತಾ ಅವರು ನವೆಂಬರ್ 16, 1986 ರಿಂದ ವಕೀಲ ವೃತ್ತಿಯನ್ನು ಆರಂಭಿಸಿ ಪ್ರಮುಖವಾಗಿ ಕೊಲ್ಕತ್ತಾ ಹೈಕೋರ್ಟ್, ಸುಪ್ರೀಂ ಕೋರ್ಟ್ ಮತ್ತು ಇತರ ಹೈಕೋರ್ಟ್‍ಗಳಲ್ಲಿ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದರು. ಜೂನ್ 22, 2006 ರಂದು ಅವರನ್ನು ಕೊಲ್ಕತ್ತಾ ಹೈಕೋರ್ಟಿನ ಖಾಯಂ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಲಾಗಿತ್ತು. ಮುಂದೆ ಅವರು ಎಪ್ರಿಲ್ 2020 ರಲ್ಲಿ ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದರು.