ಲಕ್ನೊ: ಉತ್ತರ ಪ್ರದೇಶ ಸರಕಾರವು 35,000 ಕೋಟಿ ರೂ. ವೆಚ್ಚದಲ್ಲಿ ನಾಲೆಡ್ಜ್ ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಟಿನ್ ವಿಶ್ವವಿದ್ಯಾಲಯದ ಜೊತೆ ಒಡಂಬಡಿಕೆ (ಎಂಒಯು)ಯನ್ನು ಮಾಡಿಕೊಂಡಿರುವುದಾಗಿ ಡಿ.18ರಂದು ಅಧಿಕೃತ ಹೇಳಿಕೆಯನ್ನು ನೀಡಿದೆ.
ವಿದೇಶಗಳಿಂದ ಹೂಡಿಕೆಗಳನ್ನು ಆಕರ್ಷಿಸುವ ತನ್ನ ಇತ್ತೀಚಿನ ಪ್ರಯತ್ನಗಳ ಭಾಗವಾಗಿ ಸರಕಾರವು ಸಹಿ ಹಾಕಿರುವ ಹಲವಾರು ಒಡಂಬಡಿಕೆಗಳಲ್ಲಿ ಇದೂ ಒಂದಾಗಿದೆ ಎಂದು ಹೇಳಿಕೆಯು ಬಣ್ಣಿಸಿದೆ. ಆದರೆ ಸರಕಾರದ ಪ್ರಕಟಣೆಗೆ 10 ದಿನಗಳ ಮೊದಲೇ ವಿವಿಯ ಮಾನ್ಯತೆ ರದ್ದುಗೊಂಡಿರುವುದನ್ನು ಅಮೆರಿಕದ ಅಧಿಕೃತ ದಾಖಲೆಗಳನ್ನು ಉಲ್ಲೇಖಿಸಿ indianexpress.com ವರದಿ ಮಾಡಿದೆ.
ಈ ಕುರಿತು ಬುಧವಾರ ಸ್ಪಷ್ಟೀಕರಣ ನೀಡಿರುವ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಮೂಲಸೌಕರ್ಯ ಮತ್ತು ಅಭಿವೃದ್ಧಿ) ಅರವಿಂದ್ ಕುಮಾರ್ ಅವರು, ಒಡಂಬಡಿಕೆಯನ್ನು 'ಆಸ್ಟಿನ್ ಕನ್ಸಲ್ಟಿಂಗ್ ಗ್ರೂಪ್'ನೊಂದಿಗೆ ಮಾಡಿಕೊಳ್ಳಲಾಗಿದೆಯೇ ಹೊರತು ಆಸ್ಟಿನ್ ವಿವಿಯೊಂದಿಗಲ್ಲ ಎಂದು ತಿಳಿಸಿದ್ದಾರೆ.
ಈಜಿಪ್ಟ್‌ನ ರಾಜಮನೆತನಕ್ಕೆ ಸೇರಿದ ಅಮೆರಿಕನ್ ಪ್ರಜೆ ಎಂದು
indianexpress.com ಜೊತೆ ಸಂದರ್ಶನದಲ್ಲಿ ತನ್ನನ್ನು ಬಣ್ಣಿಸಿಕೊಂಡಿರುವ ಅಷ್ರಫ್ ಅಲ್
ಮುಸ್ತಫಾ ಅವರು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಟಿನ್ ವಿಶ್ವವಿದ್ಯಾಲಯ ಹಾಗೂ ಆಸ್ಟಿನ್
ಕನ್ಸಲ್ಟಿಂಗ್ ಗ್ರೂಪ್ ಹಿಂದಿರುವ ವ್ಯಕ್ತಿಯಾಗಿದ್ದಾರೆ ಎಂದೂ ದಾಖಲೆಗಳು ತೋರಿಸಿವೆ.
ಕ್ಯಾಲಿಫೋರ್ನಿಯಾದ ಗ್ರಾಹಕ ಮತ್ತು ವ್ಯವಹಾರಗಳ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ,
ಸ್ಯಾನ್ ಫ್ರಾನ್ಸಿಸ್ಕೋದ ಆಸ್ಟಿನ್ ವಿಶ್ವವಿದ್ಯಾಲಯಕ್ಕೆ ಮಾನ್ಯತೆರಹಿತ
ಪ್ರೌಢಶಿಕ್ಷಣೋತ್ತ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು 2011ರಲ್ಲಿ ನೀಡಲಾಗಿದ್ದ
ಅನುಮತಿಯನ್ನು ಡಿಸೆಂಬರ್ 8, 2022ರಂದು ರದ್ದುಗೊಳಿಸಲಾಗಿದೆ ಮತ್ತು ಅದಕ್ಕೆ 9965
ಡಾಲರ್ ದಂಡವನ್ನೂ ವಿಧಿಸಲಾಗಿದೆ.
ಇದಲ್ಲದೆ, ಅಮೆರಿಕಾ ಸರಕಾರದ ನಿಯಮಾವಳಿಗಡಿ ವಿವಿಯು 2016-2020ರ ನಡುವಿನ ತನ್ನ ಸಾಧನೆಯ ವಾಸ್ತವ ವರದಿಯನ್ನು ವಾಸ್ತವ ಸ್ಥಿತಿಯ ಪ್ರತಿಯನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅದರಂತೆ ತಾನು ಎಂಬಿಎ ಪದವಿ ತರಗತಿಗಳನ್ನು ನಡೆಸುತ್ತಿರುವುದಾಗಿ ಹೇಳಿಕೊಂಡಿದೆಯಾದರೂ, ಆ ಕೋರ್ಸ್‌ಗೆ ಯಾವುದೇ ವಿದ್ಯಾರ್ಥಿ ನೋಂದಾಯಿಸಿಕೊಂಡಿಲ್ಲ.
'ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಒಂದು ಹಾಗೂ ಈಜಿಪ್ಟ್‌ನಲ್ಲಿ ಇನ್ನೊಂದು ಯೋಜನೆಗಾಗಿ ಲಾಭಕ್ಕಾಗಿ ಕೆಲಸ ಮಾಡುವ ಆಸ್ಟಿನ್ ಕನ್ಸಲ್ಟಿಂಗ್ ಗ್ರೂಪ್‌ನ್ನು ಇತ್ತೀಚಿಗಷ್ಟೇ ಸ್ಥಾಪಿಸಿದ್ದೇನೆ. ನಾನು ಆಸ್ಟಿನ್ ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷನೂ ಆಗಿದ್ದು, ಅದು ಲಾಭರಹಿತ ಸಂಸ್ಥೆಯಾಗಿದೆ. ಆದರೆ ಉತ್ತರ ಪ್ರದೇಶ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ತನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮುಸ್ತಫಾ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸರಕಾರವು ಒಡಂಬಡಿಕೆಯ ಪ್ರಕಟಣೆಯೊಂದಿಗೆ ಹಂಚಿಕೊಂಡಿರುವ ಚಿತ್ರಗಳು ಒಡಂಬಡಿಕೆಗೆ ಸಹಿ ಹಾಕಿದ ಸಂದರ್ಭದಲ್ಲಿ ರಾಜ್ಯ ಹಣಕಾಸು ಸಚಿವ ಸುರೇಶ್ ಖನ್ನಾ ಮತ್ತು ಮಾಜಿ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರೊಂದಿಗೆ ಮುಸ್ತಫಾ ಉಪಸ್ಥಿತಿಯನ್ನು ತೋರಿಸಿವೆ.