ಬೆಂಗಳೂರು: ಇಂಧನ ಉತ್ಪಾದನೆ, ಮೂಲಸೌಕರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಭಾರತವನ್ನು ಹೂಡಿಕೆ ಸ್ನೇಹಿಯಾಗಿಸುವುದು ಮತ್ತು ಇಂಧನ ಉತ್ಪಾದನೆಯಲ್ಲಿ ಭಾರತವನ್ನು ವಿಶ್ವದಲ್ಲೇ 3ನೇ ಸ್ಥಾನಕ್ಕೆ ತರುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ಸಿಂಗ್ ಪುರಿ ತಿಳಿಸಿದರು.
'ಭಾರತ ಇಂಧನ ಸಪ್ತಾಹ- 2023'ರ ಅಂಗವಾಗಿ ಆಯೋಜಿಸಿದ್ದ ಪೂರ್ವಸಿದ್ಧತಾ ಕಾರ್ಯಕ್ರಮದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 2030ರ ವೇಳೆಗೆ ಜೈವಿಕ ಇಂಧನ ಉತ್ಪಾದನೆ ಪ್ರಮಾಣವನ್ನು 1 ಕೋಟಿ ಲೀ. ಹೆಚ್ಚಿಸುವ ಗುರಿ ಹೊಂದಲಾಗಿತ್ತು. ಆದರೆ, ಸದ್ಯದ ಉತ್ಪಾದನಾ ಸಾಮರ್ಥ್ಯವನ್ನು ಗಮನಿಸಿ ಆ ಗುರಿಯನ್ನು 2025ಕ್ಕೆ ನಿಗದಿ ಮಾಡಲಾಗಿದೆ. ಈ ಗುರಿ ಮುಟ್ಟಿದರೆ ವಿಶ್ವದಲ್ಲಿ ಜೈವಿಕ ಇಂಧನ ಉತ್ಪಾದನೆಯಲ್ಲಿ ಭಾರತ 3ನೇ ಸ್ಥಾನಕ್ಕೆ ತಲುಪಲಿದೆ ಎಂದರು.
ಇಂಧನ ಅಭಿವೃದ್ಧಿಗೆ ಹೊಸ ತಂತ್ರ:
'ಇಂಧನ ಅಭಿವೃದ್ಧಿಗೆ ಹೊಸ ತಂತ್ರ' ಇದು ಭಾರತ ಇಂಧನ ಸಪ್ತಾಹದ ಅಡಿ ಬರಹವಾಗಿದೆ.
ಅದಕ್ಕೆ ತಕ್ಕಂತೆ ಕೆಲಸ ಮಾಡಲಾಗುತ್ತಿದೆ. 2020ರಿಂದ 2040ಕ್ಕೆ ಹೋಲಿಸಿಕೊಂಡಾಗ
ಶೇ.25ರಷ್ಟು ಇಂಧನ ಬೇಡಿಕೆ ಹೆಚ್ಚಳವಾಗಲಿದೆ. ಬೇಡಿಕೆಯನ್ನು ಅಂದಾಜಿಸಿ ಉತ್ಪಾದನಾ
ಸಾಮರ್ಥ್ಯವನ್ನು ವೃದ್ಧಿಗೊಳಿಸಲಾಗುತ್ತಿದೆ. ಜೈವಿಕ ಇಂಧನ, ಸಿಎನ್ಜಿ, ಸಿಬಿಜಿ,
ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವುದಕ್ಕೆ ಒತ್ತು ನೀಡಲಾಗುತ್ತಿದೆ. ಪೆಟ್ರೋಲಿಯಂ
ಉತ್ಪನ್ನಗಳ ಬಳಸಿ ವಾಹನ ಚಾಲನೆ ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ
ಉತ್ತೇಜಿಸಲಾಗುತ್ತಿದೆ ಎಂದರು.
ಶೀಘ್ರದಲ್ಲಿ ಇ 20 ಇಂಧನ ಮಾರುಕಟ್ಟೆಗೆ:
2022ರ ವೇಳೆಗೆ ಪೆಟ್ರೋಲ್ ಜತೆಗೆ ಶೇ.10 ಎಥೆನಾಲ್ ಮಿಶ್ರಣ ಮಾಡಿದ ಇಂಧನ ಮಾರುಕಟ್ಟೆಗೆ
ತರಲು ಉದ್ದೇಶಿಸಲಾಗಿತ್ತು. ಆದರೆ, ಸಂಶೋಧನೆ ಮತ್ತು ಉತ್ಪಾದನಾ ವಲಯದಲ್ಲಿನ
ಕಾರ್ಯಕ್ಷಮತೆಯಿಂದಾಗಿ ಪೆಟ್ರೋಲ್ ಜತೆಗೆ ಶೇ.20 ಎಥೆನಾಲ್ ಮಿಶ್ರಣ ಮಾಡಿದ ಇ 20 ಇಂಧನ
ಈಗಲೇ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ಇಂಧನವನ್ನು 2030ರ ವೇಳೆಗೆ
ಮಾರುಕಟ್ಟೆಗೆ ತರುವ ಉದ್ದೇಶ ಹೊಂದಲಾಗಿತ್ತು. ಈಗಾಗಲೇ ಇ 20 ಇಂಧನ ಸಿದ್ಧವಾಗಿರುವ
ಹಿನ್ನೆಲೆಯಲ್ಲಿ ಈ ವರ್ಷದ ಅಂತ್ಯದೊಳಗೆ ನೂತನ ಇಂಧನ ಬಳಕೆಗೆ ಸಿಗಲಿದೆ ಎಂದು ಸಚಿವ ಪುರಿ
ವಿವರಿಸಿದರು.
ವ್ಯಾಟ್ ಕಡಿಮೆಗೊಳಿಸಿದರೆ ಇಂಧನ ದರ ಇಳಿಕೆ:
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆಗೆ ಸಂಬಂಧಿಸಿದಂತೆ 5 ರಾಜ್ಯಗಳು ವ್ಯಾಟ್ ಕಡಿಮೆ
ಮಾಡಿಲ್ಲ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಿದ ನಂತರ ದೇಶಾದ್ಯಂತ ಪೆಟ್ರೋಲ್,
ಡೀಸೆಲ್ ಬೆಲೆ ಇಳಿಕೆಯಾಯಿತು. ಅದಾದ ನಂತರ ರಾಜ್ಯ ಸರ್ಕಾರಗಳು ಸುಂಕ ಕಡಿಮೆ ಮಾಡಿದವು.
ಆದರೆ, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ ರಾಜ್ಯಗಳ
ಸರ್ಕಾರಗಳು ವ್ಯಾಟ್ ಕಡಿಮೆ ಮಾಡಿಲ್ಲ. ಹೀಗಾಗಿ ಆ ರಾಜ್ಯಗಳಲ್ಲಿ ಬೆಲೆ ಇಳಿಕೆಯಾಗಿಲ್ಲ.
ಸರ್ಕಾರಗಳು ವ್ಯಾಟ್ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.
ಫೆ. 6-8ರವರೆಗೆ ಐಇಡಬ್ಲ್ಯೂ-2023:
ದೇಶದ ಇಂಧನ ಕ್ಷೇತ್ರದ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ 2023ರ ಫೆ.6ರಿಂದ 8ರ ವರೆಗೆ
ಬೆಂಗಳೂರಿನಲ್ಲಿ 'ಭಾರತ ಇಂಧನ ಸಪ್ತಾಹ 2023' ಆಯೋಜಿಸಲಾಗಿದೆ. ಸಪ್ತಾಹದಲ್ಲಿ ಭಾರತ
ಭವಿಷ್ಯದ ಯೋಜನೆಗಳು, ಹಸಿರು ಇಂಧನಕ್ಕಾಗಿ ಕೈಗೊಂಡಿರುವ ಮತ್ತು ಕೈಗೊಳ್ಳಲಿರುವ
ಕ್ರಮಗಳನ್ನು ಪರಿಚಯಿಸಲಾಗುತ್ತದೆ. ಸಪ್ತಾಹದಲ್ಲಿ 30 ಸಾವಿರಕ್ಕೂ ಹೆಚ್ಚಿನ ಜನರು
ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜತೆಗೆ 8 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, 50ಕ್ಕೂ
ಹೆಚ್ಚಿನ ಸಂಸ್ಥೆಗಳ ಹಿರಿಯ ಅಧಿಕಾರಿಗಳು, 30ಕ್ಕೂ ಹೆಚ್ಚಿನ ರಾಜ್ಯ ಮತ್ತು ದೇಶಗಳ ಇಂಧನ
ಸಚಿವರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಏಷ್ಯಾ ಖಂಡದ 9 ದೇಶಗಳ ಸಚಿವರ ದುಂಡು
ಮೇಜಿನ ಸಭೆ ನಡೆಯಲಿದ್ದು, 19 ಕಾರ್ಯತಾಂತ್ರಿಕ ಸಮಾವೇಶ ಗೋಷ್ಠಿಗಳು ಜರುಗಲಿವೆ ಎಂದು
ಸಚಿವ ಪುರಿ ತಿಳಿಸಿದರು.
ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮದಲ್ಲಿ ಜಾಗತಿಕ ಇಂಧನ ವಲಯದ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು, ಇಂಧನ, ಮಾಹಿತಿ ತಂತ್ರಜ್ಞಾನ ಹಣಕಾಸು ಕಂಪನಿಗಳು ಸೇರಿದಂತೆ ಕರ್ನಾಟಕದಲ್ಲಿನ ಪ್ರಮುಖ ಭಾರತೀಯ ಕಂಪನಿಗಳ ಪ್ರತಿನಿಧಿಗಳು, ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಮುದಾಯದ ಸದಸ್ಯರು ಮತ್ತಿತರರು ಭಾಗವಹಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.