ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 182 ಕ್ಷೇತ್ರಗಳ ಪೈಕಿ 156ರಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಚಂಡ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಿದೆ.
ಈ ಚುನಾವಣೆಯಲ್ಲಿ ಕಳಂಕಿತರು, ಜನರ ಸಮಸ್ಯೆಗೆ ಸ್ಪಂದಿಸದವರು ಸೇರಿದಂತೆ ಹಲವು ಮಂದಿ ಹಾಲಿ ಶಾಸಕರನ್ನು ಬಿಜೆಪಿ ಕಣದಿಂದ ಹೊರಗಿಟ್ಟು, ಹೊಸಬರಿಗೆ ಟಿಕೆಟ್ ನೀಡುವ ಮೂಲಕ ಹೊಸ ಪ್ರಯೋಗ ಮಾಡಿತ್ತು.
ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ 45 ಹಾಲಿ ಶಾಸಕರನ್ನು ಬಿಟ್ಟು ಆ ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ನೀಡಿತ್ತು. ಇದರಲ್ಲಿ 43 ಮಂದಿ ಗೆಲುವು ಪಡೆಯುವ ಮೂಲಕ ಕಮಲ ಪಾಳಯದ ಪ್ರಯೋಗಕ್ಕೆ ಉತ್ತಮ ಫಲ ಸಿಕ್ಕಿದೆ.
27 ವರ್ಷಗಳಿಂದ ಕೇಸರಿ ಪಕ್ಷವು ಗುಜರಾತ್‌ನಲ್ಲಿ ಅಧಿಕಾರ ನಡೆಸುತ್ತಿದ್ದು, ಸತತ ಏಳನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಬೋಟಡ್ ಮತ್ತು ವಾಘೋಡಿಯಾ ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿಯ ಹೊಸ ಅಭ್ಯರ್ಥಿಗಳು ಕ್ರಮವಾಗಿ ಆಮ್ ಆದ್ಮಿ ಮತ್ತು ಸ್ವತಂತ್ರ ಅಭ್ಯರ್ಥಿಗಳ ಎದುರು ಸೋತಿದ್ದಾರೆ.
ಬೋಟಡ್‌ನಲ್ಲಿ ಹಾಲಿ ಶಾಸಕ, ಮಾಜಿ ಇಂಧನ ಸಚಿವ ಸೌರಭ್ ಪಟೇಲ್ ಅವರನ್ನು ಕೈಬಿಟ್ಟು, ಘನಶ್ಯಾಂ ವಿರಾನಿ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಈ ಕ್ಷೇತ್ರದಿಂದ ಪಟೇಲ್ 1998, 2002, 2007 ಮತ್ತು 2017ರಲ್ಲಿ ಗೆಲುವು ಸಾಧಿಸಿದ್ದರು. ವಿರಾನಿ ಈ ಬಾರಿ ಆಮ್ ಆದ್ಮಿಯ ಉಮೇಶ್ ಮಕ್ವಾನಾ ಎದುರು 2,779 ಮತಗಳ ಅಂತರದಿಂದ ಸೋಲುಂಡಿದ್ದಾರೆ.
ವಾಘೋಡಿಯಾ ಕ್ಷೇತ್ರದಲ್ಲಿ ಹಾಲಿ ಶಾಸಕ ಮಧು ಶ್ರೀವಾಸ್ತವ ಬದಲಿಗೆ ಅಶ್ವಿನ್ ಪಟೇಲ್ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಈ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿಜೆಪಿ ಟಿಕೆಟ್ ಆಕಾಂಕ್ಷಿ ಧರ್ಮೇಂದ್ರ ಸಿಂಗ್ ವಾಘೇಲಾ 14,000 ಮತಗಳ ಅಂತರದಿಂದ ಪಟೇಲ್ ಅವರನ್ನು ಸೋಲಿಸಿದರು.
ಆದರೆ, ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯ ಹೊಸ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.