ಮುಂಬೈ: ಎರಡು ಸಮೋಸಾ, ಒಂದು ಕಪ್ ಚಹಾ ಮತ್ತು ಒಂದು ಬಾಟಲಿ ನೀರಿಗೆ ಅಬ್ಬಬ್ಬಾ ಎಂದರೆ 100 ರೂ. ಆಗಬಹುದೋ ಏನೋ. ಅದೂ ಹೆಚ್ಚೇ, ಆದರೆ ಇಲ್ಲಿ ಮಾತ್ರ ಈ ಮಹಿಳೆ ಬರೋಬ್ಬರಿ 490 ರೂ. ಪಾವತಿ ಮಾಡಿದ್ದಾಳೆ..!
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಸಮೋಸಾ, ಒಂದು ಕಪ್ ಚಹಾ ಮತ್ತು ನೀರಿನ ಬಾಟಲಿಯ ಮೇಲೆ 490 ರೂ.
ವಿಧಿಸಲಾಗಿದೆ ಎಂದು ಹೇಳಿಕೊಳ್ಳುವ ಎರಡು ಚಿತ್ರಗಳನ್ನು ಫರಾ ಖಾನ್ ಎನ್ನುವ ಮಹಿಳೆ ಪೋಸ್ಟ್ ಮಾಡಿದ್ದಾರೆ.
ಟ್ವಿಟರ್ ಬಳಕೆದಾರರಾದ ಫರಾ ಖಾನ್, ಬುಧವಾರ ಈ ಬಗ್ಗೆ ಟ್ವೀಟ್ ಮಾಡಿದ್ದು 'ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಸಮೋಸಾಗಳು, ಒಂದು ಕಪ್ ಚಹಾ ಮತ್ತು ನೀರಿನ ಬಾಟಲಿಯ ಮೇಲೆ 490. ರೂ ಬೆಲೆ ವಿಧಿಸಲಾಗಿದೆ' ಎಂದು ಹೇಳಿ ಎರಡು ಚಿತ್ರಗಳನ್ನು ಫರಾ ಖಾನ್ ಹಂಚಿಕೊಂಡಿದ್ದಾರೆ . ಟ್ವೀಟ್ನ ಕೊನೆಗೆ 'ಕಾಫಿ ಆಚೆ ದಿನ್ ಆ ಗಯೇ ಹೈ', ಎಂದು ಬರೆದು ಮೋದಿ ಸರ್ಕಾರವನ್ನೂ ಟೀಕಿಸಿದ್ದಾರೆ!
ಈ ಬಗ್ಗೆ ಅನೇಕ ನೆಟ್ಟಿಗರು ಮಹಿಳೆಯ ಕಾಲೆಳೆದಿದ್ದು, ಏರ್ಪೋರ್ಟ್ನಲ್ಲಿ ಯಾಕೆ ಬೆಲೆ ಜಾಸ್ತಿ ಎಂದು ವಿವರಿಸಿದ್ದಾರೆ. ಇನ್ನೊಬ್ಬ ಬಳಕೆದಾರರಂತೂ 'ಏರ್ಪೋರ್ಟ್ನಿಂದ ಹೊರಗೆ ಬಂದರೆ ಅಲ್ಲೇ ಬಾಬಾ ಕ್ಯಾಂಟೀನ್ ಇದೆ. ಅಲ್ಲಿ 30 ರೂ. ಗೆ ತಿನ್ನಬಹುದು' ಎಂದಿದ್ದಾರೆ.
ಇನ್ನೊಬ್ಬ ಭೂಪನಂತೂ ಆ ಮಹಿಳೆ ಹಿಂದೆ ಮಾಡಿದ್ದ ಟ್ವೀಟ್ಅನ್ನೇ ರಿಪೀಟ್ ಮಾಡಿ ಟ್ರೋಲ್ ಮಾಡಿದ್ದು ಅದರಲ್ಲಿ 'ನಿಮ್ಮ ಸಮಸ್ಯೆಗಳನ್ನು ಯಾರಲ್ಲೂ ಹಂಚಿಕೊಳ್ಳಬೇಡಿ. 20% ಜನ ಕೇರ್ ಮಾಡುವುದಿಲ್ಲ, ಉಳಿದ 80% ನಿಮಗೆ ಆ ಸಮಸ್ಯೆ ಇದೆ ಎಂದು ಖುಷಿ ಪಡುತ್ತಾರೆ' ಎಂದು ಟ್ವೀಟ್ ಮಾಡಿದ್ದರು!