ನವದೆಹಲಿ:ಇಸ್ರೋ ತನ್ನ ವಾಣಿಜ್ಯ ಘಟಕಗಳ ಮೂಲಕ ಕಳೆದ ಐದು ವರ್ಷಗಳಲ್ಲಿ 19 ರಾಷ್ಟ್ರಗಳಿಗೆ ಸೇರಿದ 177 ವಿದೇಶೀ ಉಪಗ್ರಹಗಳ ಉಡ್ಡಯನ ನಡೆಸಿದೆ ಹಾಗೂ ಈ ಉಡ್ಡಯನ ಸೇವೆಗಳ ಮೂಲಕ ದೊರೆತ ಫೋರೆಕ್ಸ್ ಪ್ರಮಾಣ ಅಂದಾಜು 94 ಮಿಲಿಯನ್ ಡಾಲರ್ ಮತ್ತು 46 ಮಿಲಿಯನ್ ಯುರೋ ಆಗಿವೆ ಎಂದು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಜನವರಿ 2018 ಹಾಗೂ ನವೆಂಬರ್ 2022 ರ ನಡುವೆ ಆಸ್ಟ್ರೇಲಿಯಾ, ಬ್ರೆಝಿಲ್, ಕೆನಡಾ, ಕೊಲಂಬಿಯಾ, ಫಿನ್‌ಲ್ಯಾಂಡ್, ಫ್ರಾನ್ಸ್, ಇಟಲಿ, ಜಪಾನ್, ಲಿಥುವೇನಿಯಾ, ಲಕ್ಸೆಂಬರ್ಗ್, ಮಲೇಷ್ಯಾ, ನೆದರ್‌ಲ್ಯಾಂಡ್ಸ್, ರಿಪಬ್ಲಿಕ್ ಆಫ್ ಕೊರಿಯಾ, ಸಿಂಗಾಪುರ, ಸ್ಪೇನ್, ಸ್ವಿಝರ್ಲ್ಯಾಂಡ್, ಇಂಗ್ಲೆಂಡ್ ಮತ್ತು ಅಮೆರಿಕಾಗಳ 177 ಉಪಗ್ರಹಗಳನ್ನು ವಾಣಿಜ್ಯ ಒಪ್ಪಂದಗಳ ಅಡಿಯಲ್ಲಿ ಪಿಎಸ್‌ಎಲ್‌ವಿ ಮತ್ತು ಜಿಎಸ್‌ಎಲ್‌ವಿ-ಎಂಕೆIII ಲಾಂಚರ್‌ಗಳ ಮೂಲಕ ಉಡ್ಡಯನ ನಡೆಸಿದೆ ಎಂದು ಸಚಿವರು ತಿಳಿಸಿದರು.
ಜೂನ್ 2020 ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ತರಲಾಯಿತು ಹಾಗೂ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ವಾಣಿಜ್ಯ-ಉದ್ದೇಶಿತ ಕಾರ್ಯಕ್ರಮಗಳನ್ನೂ ಅನುಷ್ಠಾನಗೊಳಿಸಿದ ಪರಿಣಾಮ ಎಲ್‌ವಿಎಂ3 ಒಟ್ಟು 36 ಒನ್‌ವೆಬ್ ಉಪಗ್ರಹಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಸಾಗಿದ್ದರೆ ಇತ್ತೀಚೆಗೆ ಖಾಸಗಿ ಸಂಸ್ಥೆ ಸ್ಕೈರೂಟ್ ಏರೋಸ್ಪೇಸ್ ಸಬ್‌ಆರ್ಬಿಟಲ್ ಲಾಂಚ್ ನಡೆಸಿದ್ದು ಇದು ಇಂತಹ ಮೊದಲ ಪ್ರಯತ್ನವಾಗಿದೆ ಎಂದು ಸಚಿವರು ತಿಳಿಸಿದರು.