ನವದೆಹಲಿ:ಮುಂದಿನ ವರ್ಷ ದೇಶವು 5 ಶೇಕಡ ಬೆಳವಣಿಗೆಯನ್ನು ಸಾಧಿಸಿದರೂ ನಮ್ಮ ಅದೃಷ್ಟ ಎಂದು ನನಗೆ ಅನಿಸುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಮುಂದಿನ ವರ್ಷವು ಪ್ರಸಕ್ತ ವರ್ಷಕ್ಕಿಂತಲೂ ಹೆಚ್ಚು ಕಠಿಣವಾಗಿರುತ್ತದೆ ಎಂದು ಮಾಜಿ ಗವರ್ನರ್ ಅಭಿಪ್ರಾಯಪಟ್ಟರು.
''ಯುದ್ಧ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಕಾರಣಗಳಿಂದಾಗಿ ಮುಂದಿನ ವರ್ಷವು ತುಂಬಾ ಕಠಿಣವಾಗಿರುತ್ತದೆ. ಜಗತ್ತಿನಲ್ಲಿ ಅಭಿವೃದ್ಧಿಯು ಕುಂಠಿತವಾಗುತ್ತದೆ. ಸರಕಾರಗಳು ಬಡ್ಡಿದರವನ್ನು ಏರಿಸುತ್ತವೆ ಹಾಗೂ ಅದು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ'' ಎಂದು ಅವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷದ 'ಭಾರತ್
ಜೋಡೋ ಯಾತ್ರೆ'ಯಲ್ಲಿ ರಾಹುಲ್ ಗಾಂಧಿ ಜೊತೆಗೆ ನಡೆಯುತ್ತಿದ್ದ ವೇಳೆ ಮಾತನಾಡಿದ ಅವರು,
''ಭಾರತದ ಮೇಲೂ ದುಷ್ಪರಿಣಾಮಗಳು ಆಗುತ್ತವೆ. ಭಾರತದ ಬಡ್ಡಿ ದರಗಳು ಹೆಚ್ಚಿವೆ. ಆದರೆ,
ಭಾರತೀಯ ರಫ್ತುಗಳಲ್ಲಿ ಸ್ವಲ್ಪ ಹಿಂಜರಿಕೆಯಾಗಿದೆ'' ಎಂದು ಅವರು ಹೇಳಿದರು.
''ಭಾರತದ ಹಣದುಬ್ಬರವೆಂದರೆ, ವಸ್ತುಗಳ ಹಣದುಬ್ಬರವಾಗಿದೆ, ತರಕಾರಿಗಳ ಹಣದುಬ್ಬರವಾಗಿದೆ.
ಅದು ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ'' ಎಂದು ಅವರು ಹೇಳಿದರು.