ತಿರುವನಂತಪುರ: ಮಕ್ಕಳಿಗೆ ಆಹಾರ ತಂದುಕೊಡಲು ಹಣವಿಲ್ಲದೆ ಅಸಹಾಯಕತೆಯಿಂದ ತನ್ನ ಮೂರನೇ ಮಗ ಓದುತ್ತಿದ್ದ ಶಾಲೆಯ ಶಿಕ್ಷಕಿ ಬಳಿಯೇ ₹500ಕ್ಕೆ ಅಂಗಲಾಚಿದ್ದ ಮಹಿಳೆಗೆ ನೆರವಿನ ಮಹಾಪೂರವೇ ಹರಿದುಬಂದಿದೆ. 48 ಗಂಟೆಗಳಲ್ಲಿ ಅವರ ಬ್ಯಾಂಕ್ ಖಾತೆಗೆ ₹51 ಲಕ್ಷ ಜಮೆಯಾಗಿದೆ.
ಪಾಲಕ್ಕಾಡ್ ಜಿಲ್ಲೆಯ ಕೂಟ್ಟನಾಡ್ ನಿವಾಸಿಯಾಗಿರುವ ಸುಭದ್ರ (46) ಅವರಿಗೆ ಮೂವರು ಮಕ್ಕಳು. ಕೂಲಿ ಕೆಲಸ ಮಾಡುತ್ತಿದ್ದ ಪತಿ ರಾಜನ್ ಆಗಸ್ಟ್‌ನಲ್ಲಿ ನಿಧನರಾಗಿದ್ದರು. ಹೀಗಾಗಿ ಕುಟುಂಬದ ಜವಾಬ್ದಾರಿ ಸುಭದ್ರ ಅವರ ಹೆಗಲೇರಿತ್ತು. ಸೆರೆಬ್ರಲ್ ಪಾಲ್ಸಿ ಕಾಯಿಲೆಯಿಂದ ಬಳಲುತ್ತಿದ್ದ ಎರಡನೇ ಮಗ ಅತುಲ್ ರಾಜ್ ಹಾಸಿಗೆ ಹಿಡಿದಿದ್ದ. ಆತನ ಆರೈಕೆಗಾಗಿ ಮನೆಯಲ್ಲೇ ಇರುವುದು ಅನಿವಾರ್ಯವಾಗಿತ್ತು. ಹೀಗಾಗಿ ಕೂಲಿ ಮಾಡಿ ಮಕ್ಕಳನ್ನು ಸಲಹುವುದೂ ಕಷ್ಟವೆನಿಸಿತ್ತು.
ತನ್ನ ಕೊನೆಯ ಮಗ ಅಭಿಷೇಕ್ ರಾಜ್ ಸರ್ಕಾರಿ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದ. ಆತನ ಶಾಲಾ ಶಿಕ್ಷಕಿ ಗಿರಿಜಾ ಹರಿಕುಮಾರ್ ಎಂಬುವರಿಗೆ ಹೋದ ವಾರ ಕರೆ ಮಾಡಿದ್ದ ಸುಭದ್ರ ₹500 ನೀಡುವಂತೆ ಕೇಳಿದ್ದರು. ಅವರ ಮನೆಯ ಪರಿಸ್ಥಿತಿ ಆಲಿಸಿದ್ದ ಗಿರಿಜಾ ಅವರು ₹1,000 ನೆರವು ಒದಗಿಸಿದ್ದರು. ಈ ಸಂಬಂಧ ಅವರು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಅದನ್ನು ನೋಡಿದ್ದ ಹಲವರು ಸುಭದ್ರ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ.