ಭುವನೇಶ್ವರ: ಒಡಿಶಾದಲ್ಲಿ ಶೇ 59 ರಷ್ಟು ಅರ್ಹರು ಕೋವಿಡ್ ಲಸಿಕೆಯ ಬೂಸ್ಟರ್ (ಮುನ್ನೆಚ್ಚರಿಕೆ) ಡೋಸ್ ಅನ್ನು ಇನ್ನೂ ಪಡೆದುಕೊಂಡಿಲ್ಲ. ಲಸಿಕೆ ಅಭಿಯಾನವನ್ನು ತ್ವರಿತಗೊಳಿಸಲು ಡೋಸ್‌ಗಳನ್ನು ಪೂರೈಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾ ಸರ್ಕಾರವು ಮುಂದಿನ ವರ್ಷ ನಡೆಯಲಿರುವ ರಾಜ್ಯ ಪಠ್ಯಕ್ರಮದ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ನಡೆಸಲು ಯೋಜಿಸುತ್ತಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜ್ಯದಲ್ಲಿ ಕೊವಿಡ್ ಸ್ಥಿತಿಗತಿ ಕುರಿತು ಇಂದು (ಮಂಗಳವಾರ) ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
'ರಾಜ್ಯದಲ್ಲಿರುವ 3.25 ಕೋಟಿ ಅರ್ಹ ಜನಸಂಖ್ಯೆಯಲ್ಲಿ ಕೇವಲ ಶೇ 41 ರಷ್ಟು ಮಂದಿ ಮಾತ್ರವೇ ಮುನ್ನೆಚ್ಚರಿಕೆ ಡೋಸ್ ತೆಗೆದುಕೊಂಡಿದ್ದಾರೆ. ಉಳಿದ ಶೇ 59 ರಷ್ಟು ಜನರಿಗೂ ಮೊದಲಿನಂತೆಯೇ ಉಚಿತವಾಗಿ ಲಸಿಕೆ ಸಿಗಬೇಕಿದೆ' ಎಂದು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶ ಬಿಜಯ್ ಪಾಣಿಗ್ರಾಹಿ ಮಾಹಿತಿ ನೀಡಿದ್ದಾರೆ.
'ರಾಜ್ಯ ಸರ್ಕಾರದ ವತಿಯಿಂದ ನವೆಂಬರ್ 28ರ ಬಳಿಕ ಲಸಿಕೆ ಅಭಿಯಾನ ನಡೆದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಿಸಲಾಗುತ್ತಿದೆ. ಅಭಿಯಾನವನ್ನು ಮತ್ತೆ ಆರಂಭಿಸುವ ಸಲುವಾಗಿ ಲಸಿಕೆ ಕಳುಹಿಸಿಕೊಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಡಿಸೆಂಬರ್ 23ರಂದು ಪತ್ರ ಬರೆದಿದೆ' ಎಂದೂ ಬಿಜಯ್ ಅವರು ತಿಳಿಸಿದ್ದಾರೆ.
ಆರೋಗ್ಯ ಕಾರ್ಯದರ್ಶಿ ಶಾಲಿನಿ ಪಂಡತ್ ಅವರು, 'ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ನಿತ್ಯವೂ ಹೊಸದಾಗಿ 10 ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ' ಎಂದು ಹೇಳಿದ್ದಾರೆ.
ಶಾಲೆ ಮತ್ತು ಸಾರ್ವಜನಿಕ ಶಿಕ್ಷಣ ಸಚಿವ ಎಸ್.ಆರ್. ದಾಸ್ ಅವರು, ಮುಂದಿನ ವರ್ಷ ನಡೆಯಲಿರುವ ರಾಜ್ಯ ಪಠ್ಯಕ್ರಮದ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದಿದ್ದಾರೆ. ಹಾಗೆಯೇ, ವಿದ್ಯಾರ್ಥಿಗಳು ತರಗತಿಯಲ್ಲಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದೂ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಮಾಸ್ಕ್ ಧರಿಸುವುದನ್ನು ಸದ್ಯ ಕಡ್ಡಾಯಗೊಳಿಸಿಲ್ಲ. ಆದರೆ, ಕೋವಿಡ್ ಉಪತಳಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇದು (ಮಾಸ್ಕ್ ಧರಿಸುವುದು) ಉತ್ತಮ ಎಂದು ಅವರು ಹೇಳಿದ್ದಾರೆ.
ಕೊರೊನಾವೈರಸ್‌ನ ಉಪತಳಿ 'ಬಿಎಫ್7', ಚೀನಾದಲ್ಲಿ ಕೋವಿಡ್ ಉಲ್ಬಣಕ್ಕೆ ಕಾರಣವಾಗಿದೆ. ಇದೇ ಸೋಂಕಿನ ಒಂದು ಪ್ರಕರಣ ಒಡಿಶಾದಲ್ಲಿ ಡಿಸೆಂಬರ್ 21ರಂದು ವರದಿಯಾದ ಬಳಿಕ, ಮಾಸ್ಕ್ ಬಳಕೆ ವಿಚಾರ ಮುನ್ನಲೆಗೆ ಬಂದಿದೆ.