ತಿರುವನಂತಪುರ: ಶಿವಗಿರಿಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಾಗೂ ಸಂಸ್ಕøತಿ ಇಲಾಖೆ ಬದ್ಧವಾಗಿದ್ದು, 70 ಕೋಟಿ ವೆಚ್ಚದ ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಶಿವಗಿರಿಯಲ್ಲಿ 90ನೇ ಪಾದಯಾತ್ರೆಯನ್ನು ಉದ್ಘಾಟಿಸಿ ಸಚಿವರು ಇಂದು ಬೆಳಿಗ್ಗೆ ಮಾತನಾಡಿದರು. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀನಾರಾಯಣ ಧರ್ಮ ಸಂಘದ ಟ್ರಸ್ಟ್ ಅಧ್ಯಕ್ಷ ಸಚ್ಚಿದಾನಂದ ಸ್ವಾಮಿ ಧ್ವಜಾರೋಹಣ ಮಾಡುವ ಮೂಲಕ ಪಾದಯಾತ್ರೆ ಆರಂಭವಾಯಿತು. ಮಾನವರೆಲ್ಲರೂ ಒಂದೇ ಎಂಬ ಶ್ರೀ ನಾರಾಯಣ ಗುರುಗಳ ಸಂದೇಶ ಸಾರಿದ ರಾಜನಾಥ್ ಸಿಂಗ್, ಶಿವಗಿರಿಯ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಕೇಂದ್ರ ಸಚಿವರ ಒಂದು ಗಂಟೆಯ ಸುದೀರ್ಘ ಭಾಷಣದಲ್ಲಿ ಸಕಲ ಜೀವರಾಶಿಗಳನ್ನು ಮನುಷ್ಯರಂತೆ ಸಮಾನವಾಗಿ ಕಾಣುವ ಮಹತ್ವ ಸಾರಿದರು. ಮನುಷ್ಯನಿಗೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂಬ ಗುರುಗಳ ಪರಿಕಲ್ಪನೆಯ ಮಹತ್ವವನ್ನು ಕೇಂದ್ರ ಸಚಿವರು ತಿಳಿಸಿದರು. ಪ್ರಧಾನಮಂತ್ರಿ ಮೋದಿಯವರ ತಾಯಿಯ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಭಾಷಣ ಮುಕ್ತಾಯಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚ್ಚಿದಾನಂದ ಸ್ವಾಮಿ ವಹಿಸಿದ್ದರು. ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್, ಶಾಸಕರಾದ ಕಡಕಂಪಲ್ಲಿ ಸುರೇಂದ್ರನ್, ವಿ. ಸಂತೋಷ್ ಮತ್ತಿತರರು ಭಾಗವಹಿಸಿದ್ದರು. ಶಿವಗಿರಿ ಯಾತ್ರೆ ಭಾನುವಾರದವರೆಗೆ ನಡೆಯಲಿದೆ. ಮೂರು ದಿನಗಳ ಸಮ್ಮೇಳನದಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಶಿವಗಿರಿ ಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.
ಶಿವಗಿರಿಯ ಸಮಗ್ರ ಅಭಿವೃದ್ಧಿಗೆ ಬದ್ಧ: 70 ಕೋಟಿ ವೆಚ್ಚದ ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ: ರಾಜನಾಥ್ ಸಿಂಗ್
0
ಡಿಸೆಂಬರ್ 30, 2022