ನವದೆಹಲಿ: ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ (ಎಫ್‌ಎಂಜಿಇ) ಅರ್ಹತೆ ಪಡೆಯದವರಿಗೆ ದೇಶದಲ್ಲಿ ವೈದ್ಯಕೀಯ ವೃತ್ತಿ ಅಭ್ಯಾಸಕ್ಕೆ ಅನುಮತಿಸಿದ 14 ರಾಜ್ಯಗಳ ವೈದ್ಯಕೀಯ ಮಂಡಳಿ ಅಧಿಕಾರಿಗಳು ಮತ್ತು 73 ವಿದೇಶಿ ವೈದ್ಯಕೀಯ ಪದವೀಧರರ ವಿರುದ್ಧ ಸಿಬಿಐ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ವಿದೇಶದಲ್ಲಿ ವೈದ್ಯಕೀಯ ಪದವಿ (ಎಂಬಿಬಿಎಸ್) ಪಡೆದವರು ದೇಶದಲ್ಲಿ ವೈದ್ಯ ವೃತ್ತಿ ಆರಂಭಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಅಥವಾ ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಲು ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಅರ್ಹತಾ ಪರೀಕ್ಷೆ ಎಫ್‌ಎಂಜಿಇಯಲ್ಲಿ ಕನಿಷ್ಠ ಅರ್ಹತಾ ಅಂಕ ಪಡೆಯುವುದು ಕಡ್ಡಾಯವಾಗಿದೆ.
2011ರಿಂದ 22ರ ಅವಧಿಯಲ್ಲಿ ನೈಜೀರಿಯಾ, ರಷ್ಯಾ, ಉಕ್ರೇನ್, ಚೀನಾದಿಂದ ವೈದ್ಯಕೀಯ ಶಿಕ್ಷಣ ಪದವಿ ಪಡೆದಿರುವ 73 ಮಂದಿಗೆ ಅರ್ಹತೆ ಸಿಕ್ಕಿಲ್ಲ. ಇವರು ವಿವಿಧ ರಾಜ್ಯಗಳ ವೈದ್ಯಕೀಯ ಮಂಡಳಿಗಳಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ಆರೋಗ್ಯ ಸಚಿವಾಲಯಕ್ಕೆ ತಿಳಿಸಿತ್ತು. ಸಚಿವಾಲಯ ಸಿಬಿಐಗೆ ದೂರು ನೀಡಿತ್ತು.