ಮಂಜೇಶ್ವರ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೂಚನೆ ಮೇರೆಗೆ ಮಂಜೇಶ್ವರ ತಾಲೂಕಿನ ಹೊಸಬೆಟ್ಟು ಕಟ್ಟೆ ಬಜಾರ್ ನಲ್ಲಿ ಪ್ರವಾಹ ವಿಷಯದ ಕುರಿತು ಅಣಕು ಡ್ರಿಲ್ ಆಯೋಜಿಸಲಾಗಿತ್ತು. ನಿಗದಿಯಂತೆ ಬೆಳಗ್ಗೆ 9 ಗಂಟೆಗೆ ಅಣಕು ಕಸರತ್ತು ಆರಂಭವಾಯಿತು. ಭಾರೀ ಮಳೆಯಿಂದಾಗಿ ಮಂಜೇಶ್ವರ ನದಿಯಲ್ಲಿ ನೀರು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಸೂಚನೆ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೊಸಬೆಟ್ಟು ಕಟ್ಟೆ ಬಜಾರ್ ನ ಹಲವು ಕುಟುಂಬಗಳನ್ನು ಸ್ಥಳಾಂತರಿಸಿದರು. ಮಂಜೇಶ್ವರ ಜಿಡಬ್ಲ್ಯುಎಲ್‍ಪಿ ಶಾಲೆಯಲ್ಲಿ ಸ್ಥಾಪಿಸಲಾದ ಪರಿಹಾರ ಶಿಬಿರಕ್ಕೆ 17 ಕುಟುಂಬಗಳನ್ನು ಸ್ಥಳಾಂತರಿಸಲಾಯಿತು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಉಪ್ಪಳದ ಅಗ್ನಿಶಾಮಕ ಮತ್ತು ರಕ್ಷಣಾ ಪಡೆಗಳು, ಮಂಜೇಶ್ವರ ಪೋಲೀಸರು ಮತ್ತು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. 20 ಮಕ್ಕಳು ಸೇರಿದಂತೆ 75 ಜನರನ್ನು ರಕ್ಷಿಸಲಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಮಂಗಲ್ಪಾಡಿ ತಾಲೂಕು ಕೇಂದ್ರ ಆಸ್ಪತ್ರೆಯಿಂದ ತರಲಾದ ಆಂಬ್ಯುಲೆನ್ಸ್‍ನಲ್ಲಿ ಮಂಜೇಶ್ವರ ಶಾಲೆಗೆ ಕರೆದೊಯ್ಯಲಾಯಿತು. 25 ಮಂದಿ ಪುರುಷರು, 30 ಮಂದಿ ಮಹಿಳೆಯರು ಮತ್ತು 20 ಮಕ್ಕಳನ್ನು ನಂತರ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್ ಸಿ) ದ ವೈದ್ಯಾಧಿಕಾರಿ ಡಾ.ಕೆ.ಐಶ್ವರ್ಯ ನೇತೃತ್ವದ ವೈದ್ಯಕೀಯ ತಂಡ ವೈದ್ಯಕೀಯ ನೆರವು ನೀಡಿತು. ಮಂಜೇಶ್ವರ ಪೋಲೀಸ್ ಠಾಣೆಯ ಎಸ್‍ಎಚ್‍ಒ ಎ.ಸಂತೋಷ್ ಕುಮಾರ್ ನೇತೃತ್ವದ ಪೋಲೀಸ್ ತಂಡ ಮತ್ತು ಕುಂಬಳೆ ಕರಾವಳಿ ಪೋಲೀಸ್ ಠಾಣೆಯ ತಂಡವು ಪರಿಹಾರ ಕಾರ್ಯದಲ್ಲಿ ಭಾಗವಹಿಸಿತ್ತು. ಪೆÇಲೀಸ್ ವಾಹನಗಳಲ್ಲಿ ಜನರನ್ನು ಶಿಬಿರಗಳಿಗೆ ಕರೆತರಲಾಯಿತು.
ಕಣ್ಣೂರು ರಕ್ಷಣಾ ಸೇವಾ ಕೇಂದ್ರದ ಕ್ಯಾಪ್ಟನ್ ಜಗದೀಶ್ ಸಿಂಗ್ ಅಣಕು ಪರಿಹಾರ ತರಬೇತಿ(ಮಾಕ್ ಡ್ರಿಲ್) ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿದರು. ಮಂಜೇಶ್ವರ ತಹಸೀಲ್ದಾರ್ ವಿ.ರವೀಂದ್ರನ್, ತಹಸೀಲ್ದಾರ್ (ಎಲ್.ಆರ್) ಕೆ.ಎ.ಜೇಕಬ್, ಜೂನಿಯರ್ ಸೂಪರಿಂಟೆಂಡೆಂಟ್ (ಜೆ) ಸಿ.ರುಗ್ಮಿಣಿ ದೇವಿ, ಜೂನಿಯರ್ ಅಧೀಕ್ಷಕ (ಡಿ) ಸುನಿಲ್ ಕುಮಾರ್, ಹೆಡ್ ಕ್ಲರ್ಕ್ ಕೆ.ಜಗದೀಶ್, ಗ್ರಾಮಾಧಿಕಾರಿ ಕೆ.ಚಂದ್ರಶೇಖರನ್ ಮತ್ತು ಗುಮಾಸ್ತರಾದ ಬಶೀರ್ ಮುಹಮ್ಮದ್ ಮತ್ತು ಮುಹಮ್ಮದ್ ಅನಸ್ ಸಮನ್ವಯಕಾರರಾಗಿ ಸಹಕರಿಸಿದರು.