ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 78ನೇ ವಾರ್ಷಿಕೋತ್ಸವ ಭಾನುವಾರ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಜರಗಿತು.
ಊಜಂಪಾಡಿ ನಾರಾಯಣ ನಾೈಕ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷÀ ಎಸ್.ವಿ. ಭಟ್ ಅವರು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಸ್ಥಾಪಕಾಧ್ಯಕ್ಷ ಕೀರ್ತಿಶೇಷ ಕಿರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸಂಸ್ಮರಣಾ ಭಾಷಣಗೈದರು. ಯಕ್ಷಗಾನದ ಧ್ರುವತಾರೆಯೆಂದೇ ಕೊಂಡಾಡಲ್ಪಡುವ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರು ಎಲ್ಲ ನೆಲೆಯಲ್ಲೂ ಉತ್ತುಂಗ ಶಿಖರವನ್ನು ಏರಿದವರು. ಅವರ ಪ್ರೌಢಿಮೆಗಳು ಅವರ ಸುಪುತ್ರ ರಮಾನಂದ ಬನಾರಿಯವರಿಗೆ ಬಂದಿದೆ. ಯಕ್ಷಗಾನವನ್ನು ಶ್ರೀಮಂತಗೊಳಿಸಲು ಮುಂದೆ ಎಲ್ಲರೂ ಯಕ್ಷಗಾನಾರಾಧಕರಾಗಿರಬೇಕು ಎನ್ನುವ ನಿಟ್ಟಿನಿಂದ ಕಲಾಸಂಘವನ್ನು ಕಟ್ಟಿದವರು ಕೀ.ಮಾ.ವಿ ಅವರು. ಕಾಸರಗೋಡು ಜಿಲ್ಲೆಯಲ್ಲಿ ನಿರಂತರವಾಗಿ ಯಕ್ಷಗಾನ ತಾಳಮದ್ದಳೆ ನಡೆಯುವ ಕ್ಷೇತ್ರ ಬನಾರಿ ಮಾತ್ರವೆಂದು ಅವರು ತಿಳಿಸಿದರು.
2022ರ ಕೀರಿಕ್ಕಾಡು ಪ್ರಶಸ್ತಿಯನ್ನು ಕೋಳ್ಯೂರು ಡಾ.ರಾಮಚಂದ್ರ ರಾವ್ ಅವರಿಗೆ ಪ್ರದಾನ ಮಾಡಲಾಯಿತು. ಗಣರಾಜ ಕುಂಬ್ಳೆ ರಾಮಕುಂಜ ಅವರು ಅಭಿನಂದನಾ ಭಾಷಣಗೈದು, ಯಕ್ಷಗಾನ ಲೋಕ ಕಂಡ ಅಪ್ರತಿಮ ಕಲಾವಿದ ಕೋಳ್ಯೂರು. ವಾಸ್ತವತೆಯನ್ನು ಕಟ್ಟಿ ಕೊಡುವ ವೇಷ ಅವರದ್ದು. ಯಕ್ಷಗಾನಕ್ಕೆ ಗುರುಗಳಾದ ರಾಮಚಂದ್ರ ರಾವ್ ಅವರು ಕನ್ನಡಿಗರೊಂದಿಗೆ ಕನ್ನಡಿಗರಾಗಿ ತುಳು ಭಾಷಿಕರೊಂದಿಗೆ ತುಳುವರಾಗಿಯೂ ಹೊಂದಿಕೊಳ್ಳಬಲ್ಲವರು. ಇವರ ಮುಖಭಾವದೊಂದಿಗೆ ಪಾತ್ರದ ಪ್ರದರ್ಶನ ಅನನ್ಯವಾದದ್ದು. ಸ್ತ್ರೀ ವೇಷಗಳು ಆಧುನಿಕತೆಯತ್ತ ಮುಖ ಮಾಡುತ್ತಿರುವ ಈ ಕಾಲದಲ್ಲಿಯೂ ಪರಂಪರೆಯನ್ನು ಬಿಟ್ಟುಕೊಡದ ಶ್ರೀಯುತರು ನಿಜಕ್ಕೂ ಅಪೂರ್ವ ಕಲಾರಾಧಕರು. ಈಗಾಗಲೇ ಗೌರವ ಡಾಕ್ಟರೇಟ್ ಪಡೆದಿರುವ ಕೋಳ್ಯೂರು ಅವರು ಯಕ್ಷಗಾನದ ಉಸಿರಿರುವ ನೆಲ ಬನಾರಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಹಿರಿಯ ಭಾಗವತರು ವಿಶ್ವವಿನೋದ ಬನಾರಿಯವರು ಸನ್ಮಾನ ಪತ್ರ ವಾಚಿಸಿದರು. ಕೋಳ್ಯೂರು ರಾಮಚಂದ್ರ ರಾವ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ವೇಷಧಾರಿಗಳಾದ ವಿಟ್ಲ ಶಂಭು ಶರ್ಮ ಮತ್ತು ಚೆನ್ನಪ್ಪ ಗೌಡ ಸಜಿಪ ಅವರಿಗೆ ಯಕ್ಷ ಸಾಧಕ ಸನ್ಮಾನವನ್ನು ನೀಡಲಾಯಿತು. ಚಂದ್ರಶೇಖರ ಏತಡ್ಕ ಸನ್ಮಾನಿತರ ಪರಿಚಯ ಮಾಡಿದರು.
ಡಾ. ರಮಾನಂದ ಬನಾರಿ ಅವರು ಬರೆದಿರುವ “ಹನಿ ಹನಿ ಹನಿಯುತ್ತಿರುವ ಹನಿಗಳು” ಕೃತಿಯನ್ನು ಇದೇ ಸಂದರ್ಭ ಪ್ರದೀಪ್ ಕುಮಾರ್ ಕಲ್ಕೂರ ಅವರು ಬಿಡುಗಡೆಗೊಳಿಸಿ “ಪಯಸ್ವಿನಿಯ ಹರಿವಿನಂತೆ ಇಲ್ಲಿ ಯಕ್ಷಗಾನ ಹರಿಯುತ್ತಿದೆ. ಅಂತಹ ಯಕ್ಷಗಾನ ಸಂಘವನ್ನು ಕಟ್ಟಿದ ಕೀ.ಮಾ.ವಿ ಅವರ ಸುಪುತ್ರರ ಈ ಕೃತಿಯಲ್ಲಿನ ಬರಹಗಳು ಚಿಕಿತ್ಸಕ ಶಕ್ತಿಯನ್ನು ನೀಡುತ್ತದೆ” ಎಂದು ಅಭಿಪ್ರಾಯಪಟ್ಟರು.
ಡಾ. ಮುರಲೀಮೋಹನ್ ಮೋಹನ್ ಚೂಂತಾರು ಅವರು ಮುಖ್ಯ ಅತಿಥಿಯಾಗಿದ್ದು ಡಾ.ಬನಾರಿಯವರ ಬಗ್ಗೆ ಅಭಿಮಾನದ ಮಾತುಗಳನಾಡಿದರು.
ಕು. ಈಶ್ವರಿ ಪೃಥ್ವಿ ಬನಾರಿ ಪ್ರಾರ್ಥನಾ ಗೀತೆ ಹಾಡಿದರು. ಕಲಾ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಮಂಜೇಶ್ವರ ಸ್ವಾಗತಿಸಿ, ರಮಾನಂದ ರೈ ದೇಲಂಪಾಡಿ ವಂದಿಸಿದರು. ನಾರಾಯಣ ಡಿ. ಕಾರ್ಯಕ್ರಮ ನಿರೂಪಿಸಿದರು.