ಅಗರ್ತಲಾ: ತ್ರಿಪುರಾ ರಾಜ್ಯದ ಖೊವಾಯಿ ಜಿಲ್ಲಾಸ್ಪತ್ರೆಯಲ್ಲಿ 82 ವರ್ಷ ವಯಸ್ಸಿನ ವಿಚಾರಣಾಧೀನ ಕೈದಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನವೆಂಬರ್ 16 ರಂದು 11 ವರ್ಷದ ಬಾಲಕಿ ಕಾಣೆಯಾಗಿದ್ದಳು, ಕೆಲವು ಸಮಯದ ನಂತರ ಪಕ್ಕದ ಮನೆಯ ಆರೋಪಿಯಾದ ಬಾಸುದೇಬ್ ತಾಂತಿ ಮನೆಯಿಂದ ಹೊರಬಂದಿದ್ದಳು.
ಬಾಲಕಿಯು ತಾಂತಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ತನ್ನ ತಾಯಿಗೆ ಹೇಳಿದ್ದಳು.
ಬಾಲಕಿಯ ತಂದೆ ನವೆಂಬರ್ 16 ರಂದು ಖೊವಾಯಿ ಜಿಲ್ಲೆಯ ಮಹಿಳಾ ಠಾಣೆಯಲ್ಲಿ ತಾಂತಿ ವಿರುದ್ದ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದರು. ಪೊಲೀಸರು ನವೆಂಬರ್ 18 ರಂದು ಆರೋಪಿಯನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನದಲ್ಲಿರುವಂತೆ ಆದೇಶಿಸಿತ್ತು. ಜೈಲಿನಲ್ಲಿ ಭಾನುವಾರ ರಾತ್ರಿ ಮೂತ್ರ ವಿಸರ್ಜನೆಗೆ ಆರೋಪಿಯು ಹೋದಾಗ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದನು. ತಕ್ಷಣ ಅವನನ್ನು ಖೊವಾಯಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಸೋಮವಾರ ಆರೋಪಿ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರಿಕ್ಷೆಯ ನಂತರ ಆರೋಪಿಯ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಉಪ ಜೈಲರ್ ಬಿಜೋಯ್ ಬಿಸ್ವಾಸ್ ತಿಳಿಸಿದ್ದಾರೆ.
ವಿಚಾರಣಾ ಕೈದಿಯ ಸಾವು ಅಸ್ವಭಾವಿಕವೆಂದು ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಖೊವಾಯಿ ಪೊಲೀಸ್ ಠಾಣಾಧಿಕಾರಿ ರಾಜಕುಮಾರ್ ಜಮಾತಿಯಾ ತಿಳಿಸಿದ್ದಾರೆ.