ನವದೆಹಲಿ: ಹಣಕಾಸು ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಬ್ಯಾಂಕ್ ಗಳು ರೂ. 8.5 ಲಕ್ಷ ಕೋಟಿ ಸಾಲ ಮನ್ನಾ (ರೈಟ್ ಅಫ್) ಮಾಡಿವೆ.
ಈ ಅವಧಿಯಲ್ಲಿ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ. 1.65 ಲಕ್ಷ ಕೋಟಿ ಮನ್ನಾ (ರೈಟ್ ಆಫ್) ಮಾಡಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ರೂ. 59. 807 ಕೋಟಿ ಮನ್ನಾ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2022ರ ಆರ್ಥಿಕ ವರ್ಷದಲ್ಲಿ ರೂ. 19,666 ಕೋಟಿ, 2021ರಲ್ಲಿ ರೂ. 34, 402 ಕೋಟಿ, 2020ರಲ್ಲಿ ರೂ. 52, 362 ಕೋಟಿ ಮತ್ತು 2019ರಲ್ಲಿ ರೂ. 58. 905 ಕೋಟಿ ಸಾಲ ಮನ್ನಾ ಮಾಡಿದೆ.
ಐಡಿಬಿಐ ಬ್ಯಾಂಕ್ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟಾರೇ ರೂ. 33, 135 ಕೋಟಿ ಸಾಲ ಮನ್ನಾ ಮಾಡಿದೆ. ಐಸಿಐಸಿಐ ಬ್ಯಾಂಕ್ ರೂ. 42, 164 ಕೋಟಿ ಮತ್ತು ಹೆಚ್ ಡಿಎಫ್ ಸಿ ಬ್ಯಾಂಕ್ ರೂ. 31, 516 ಕೋಟಿ ಸಾಲ ಮನ್ನಾ ಮಾಡಿವೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳು ಮತ್ತು ಬ್ಯಾಂಕ್‌ಗಳ ಮಂಡಳಿ, ಅನುಮೋದಿಸಲಾದ ನೀತಿಯ ಪ್ರಕಾರ, ಬ್ಯಾಂಕ್ ಗಳು ಲಭ್ಯವಿರುವ ತೆರಿಗೆಗಳು, ಬಂಡವಾಳದಿಂದ ತಮ್ಮ ಬ್ಯಾಲೆನ್ಸ್ ಶೀಟ್ ಸರಿಪಡಿಸಿಕೊಳ್ಳಲು ಪೂರ್ಣ ವಿನಾಯಿತಿ ಇದೆ ಎಂದರು.
ಸಾಲ ಮನ್ನಾಗೊಂಡ ಸುಸ್ಥಿದಾರರು ಮರುಪಾವತಿಗೆ ಜವಾಬ್ದಾರರಾಗಿರುತ್ತಾರೆ ಮತ್ತು ಸಾಲಗಾರರಿಂದ ಬಾಕಿ ವಸೂಲಿ ಪ್ರಕ್ರಿಯೆ ಮುಂದುವರಿಯುತ್ತದೆ. ಲಭ್ಯವಿರುವ ವಿವಿಧ ಕಾರ್ಯವಿಧಾನಗಳ ಮೂಲಕ ಬ್ಯಾಂಕ್‌ಗಳು ಮರು ಪಾವತಿ ಮಾಡಿಸಿಕೊಳ್ಳುತ್ತವೆ ಎಂದು ಅವರು ತಿಳಿಸಿದರು.
ಆರ್ ಬಿಐ ಮಾರ್ಗಸೂಚಿ ಮತ್ತು ಬ್ಯಾಂಕ್ ಗಳ ಆಡಳಿತ ಮಂಡಳಿ ಅನುಮೋದಿಸಿದ ನೀತಿ ಪ್ರಕಾರ, ನಾಲ್ಕು ವರ್ಷ ವಿನಾಯಿತಿ ಪಡೆದ ನಂತರ ನಂತರ ಸಾಲ ಮನ್ನಾ ಪ್ರಕ್ರಿಯೆ ಮೂಲಕ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ನಿಂದ ತೆಗೆಯಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.