ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ 2021ರಲ್ಲಿ ರೈತರು ನಡೆಸಿದ ಪ್ರತಿಭಟನೆ ವೇಳೆ ದಾಖಲಿಸಿದ್ದ 86 ಪ್ರಕರಣಗಳನ್ನು ವಾಪಾಸು ಪಡೆಯಲು ಕೇಂದ್ರದ ಗೃಹಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.
ಇದರ ಜತೆಗೆ ರೈಲ್ವೆ ಅಧಿಕಾರಿಗಳು, ರೈತರ ವಿರುದ್ಧದ ಪ್ರಥಮ ಮಾಹಿತಿ ವರದಿಗಳನ್ನು ರದ್ದುಪಡಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ರೈತರು ನಡೆಸಿದ 12 ತಿಂಗಳ ವ್ಯಾಪಕ ಪ್ರತಿಭಟನೆ ವೇಳೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳಡಿ ದಾಖಲಿಸಿದ್ದ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ ಎಂದು ರೈತ ಸಂಘಟನೆಗಳ ಮುಖಂಡರು ಆಪಾದಿಸಿದ್ದಾರೆ.
ಕೃಷಿ ಮಾರುಕಟ್ಟೆ ಉದಾರೀಕರಣದ ಹೆಸರಿನಲ್ಲಿ ಜಾರಿಗೆ ಬಂದಿದ್ದ ಮೂರು ಕಾನೂನುಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ, 2021ರ ನವೆಂಬರ್ 19ರಂದು ಘೋಷಿಸಿದ ಬಳಿಕ ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್‍ನಡಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘಟನೆಗಳು ಪ್ರತಿಭಟನೆ ವಾಪಾಸು ಪಡೆದಿದ್ದವು. ಗಂಭೀರ ಪ್ರಕರಣಗಳನ್ನು ಹೊರತುಪಡಿಸಿ, ರೈತರ ವಿರುದ್ಧದ ಎಲ್ಲ ಪ್ರಕರಣಗಳನ್ನು ರದ್ದುಪಡಿಸುವುದಾಗಿ ಕೃಷಿ ಸಚಿವಾಲಯ ರೈತ ಸಂಘಟನೆಗಳಿಗೆ ಲಿಖಿತ ಭರವಸೆ ನೀಡಿತ್ತು.
ಗೃಹ ಸಚಿವಾಲಯದಿಂದ ಲಭ್ಯವಾದ ಮಾಹಿತಿಗಳ ಪ್ರಕಾರ 86 ಪ್ರಕರಣ ವಾಪಾಸು ಪಡೆಯಲಾಗಿದೆ ಎಂದು ಕೃಷಿ ಸಚಿವ ನರೇಂದ್ರ ಥೋಮರ್ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.