ನವದೆಹಲಿ: ದೇಶದ ಟಾಪ್ 50 ಉದ್ದೇಶಪೂರ್ವಕ ಸುಸ್ತಿದಾರರು ವಿವಿಧ ಬ್ಯಾಂಕ್ಗಳಿಗೆ 2022ರ ಮಾರ್ಚ್ 31ಕ್ಕೆ ಅನ್ವಯವಾಗುವಂತೆ 92,570 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಅವರಲ್ಲಿ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮೊದಲ ಸ್ಥಾನದಲ್ಲಿದ್ದಾರೆ.
ಲೋಕಸಭೆಗೆ ಹಣಕಾಸು ಖಾತೆಯ ರಾಜ್ಯ ಸಚಿವ ಭಗವತ್ ಕರಾಡ್ ಪ್ರಶ್ನೆಯೊಂದಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
ಮೆಹುಲ್ ಚೋಕ್ಸಿ ಒಡೆತನದ ಗೀತಾಂಜಲಿ ಜೆಮ್್ಸ 7,848 ಕೋಟಿ ರೂ., ಎರಾ ಇನ್ಫ್ರಾ 5789 ಕೋಟಿ ರೂ. ಮತ್ತು ರೇಗೋ ಆಗ್ರೋ 4803 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಒಟ್ಟು ಅನುತ್ಪಾದಕ ಆಸ್ತಿ (ಎನ್ಪಿಎ) 3 ಲಕ್ಷ ಕೋಟಿ ರೂ.ಯಷ್ಟು ಕಡಿಮೆಯಾಗಿದೆ. 8.9 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿತ್ತು. ಆರ್ಬಿಐನ ಆಸ್ತಿ ಗುಣಮಟ್ಟ ಪರಿಶೀಲನೆ ನಂತರ ಒಟ್ಟು ಎನ್ಪಿಎಗಳು 5.41 ಲಕ್ಷ ಕೋಟಿ ರೂ.ಗೆ ಇಳಿದಿವೆ ಎಂದು ಅವರು ಹೇಳಿದ್ದಾರೆ. ಸದನವಿರುವುದು ಅಜಾಗರೂಕ ರಾಜಕಾರಣಕ್ಕಾಗಿ ಅಲ್ಲ: ಕೇಂದ್ರ ಸರ್ಕಾರವು ಇಸ್ರೇಲ್ನ ಸ್ಪೈವೇರ್ ಪೆಗಾಸಸ್ ಮೂಲಕ ರಾಜಕಾರಣಿಗಳ ಮೇಲೆ ಕಣ್ಣಿಟ್ಟಿದೆ ಎಂಬ ಕಾಂಗ್ರೆಸ್ ಸದಸ್ಯ ಗೌರವ್ ಗೊಗೊಯ್ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ತಿರುಗೇಟು ನೀಡಿದ್ದು, ಆರೋಪಕ್ಕೆ ಸಾಕ್ಷ್ಯಾಧಾರ ಒದಗಿಸುವಂತೆ ಒತ್ತಾಯಿಸಿದರು.
ಲೋಕಸಭೆಯಲ್ಲಿ ಡ್ರಗ್ ಹಾವಳಿ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಗೊಗೊಯ್, ನೀವು (ಸರ್ಕಾರ) ನಮ್ಮ ಮತ್ತು ಪತ್ರಕರ್ತರ ಫೋನ್ಗಳಲ್ಲಿ ಪೆಗಾಸಸ್ ಅಳವಡಿಸಿದ್ದೀರಿ. ಪೆಗಾಸಸ್ ಮೂಲಕ ಇಲ್ಲಿಯವರೆಗೆ ಎಷ್ಟು ಡ್ರಗ್ ಮಾಫಿಯಾಗಳನ್ನು ಹಿಡಿದಿದ್ದೀರಿ ಎಂಬುದನ್ನು ತಿಳಿಸಿ ಎಂದು ಪಟ್ಟು ಹಿಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಷಾ, ಗೊಗೊಯ್ ತಮ್ಮ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು ಇಲ್ಲವೇ ಪುರಾವೆ ಒದಗಿಸಬೇಕು ಎಂದರು. ಸರ್ಕಾರ ಉಗ್ರವಾದದಂತೆಯೇ ಮಾದಕವಸ್ತು ಜಾಲವನ್ನು ಪರಿಗಣಿಸಿದ್ದು, ಅದರ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಅನುಸರಿಸುತ್ತಿದೆ ಎಂದರು.
ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ: ಸಂಸತ್ತಿನಲ್ಲಿ ಭಾರತ-ಚೀನಾ ಗಡಿ ಸಮಸ್ಯೆ ಕುರಿತು ಚರ್ಚೆಗೆ ಅವಕಾಶ ನೀಡದಿದ್ದಕ್ಕಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗಂಭೀರವಿಷಯಗಳ ಬಗ್ಗೆ ಕೇಂದ್ರದ ಮೌನವು ಅದರ ನಿರ್ಣಾಯಕ ಲಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಚೀನಾ ನಮ್ಮಮೇಲೆ ನಿರಂತರವಾಗಿ ಏಕೆ ದಾಳಿಗಳನ್ನು ನಡೆಸುತ್ತಿದೆ, ಈ ದಾಳಿಗಳನ್ನು ಹಿಮ್ಮೆಟ್ಟಿಸಲು ಯಾವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ಚೀನಾದ ಮಿಲಿಟರಿ ಹಗೆತನಕ್ಕೆ ಆರ್ಥಿಕ ಪ್ರತಿಕ್ರಿಯೆ ಏಕಿಲ್ಲ? ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ. ಈ ಮಧ್ಯೆ, ತವಾಂಗ್ ಗಡಿಯಲ್ಲಿನ ಘರ್ಷಣೆ ಕುರಿತು ನಿಯಮ 267ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿದ್ದ ಎರಡು ಅರ್ಜಿಗಳನ್ನು ರಾಜ್ಯಸಭೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಿರಸ್ಕರಿಸಿದ್ದಾರೆ. ಇದರಿಂದ ಕುಪಿತರಾದ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
ಕೇರಳಕ್ಕೆ 1000 ಟನ್ ರಾಗಿ ಪೂರೈಸಲು ಕರ್ನಾಟಕ ಸಿದ್ಧ: ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್ ) ಮೂಲಕ ಈ ವರ್ಷ ಕೇರಳದ ಬೇಡಿಕೆ ಪೂರೈಸಲು 1 ಸಾವಿರ ಟನ್ ರಾಗಿಯನ್ನು ಪೂರೈಸಲು ಕರ್ನಾಟಕ ಸಮರ್ಥವಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಗ್ರಾಹಕ ವ್ಯವಹಾರ, ಆಹಾರ ಪೂರೈಕೆ ಖಾತೆಯ ಸಹಾಯಕ ಸಚಿವೆ ಸಾಧಿವ ನಿರಂಜನ್ ಜ್ಯೋತಿ, ಕೇರಳ ಸರ್ಕಾರವು 991 ಟನ್ ರಾಗಿಗೆ ಮನವಿ ಮಾಡಿದೆ. ಮುಂಬರುವ 2022-23ರ ಮುಂಗಾರು ಹಂಗಾಮಿನ ಋತುವಿನಲ್ಲಿ ಕರ್ನಾಟಕವು ಸಾವಿರ ಟನ್ ರಾಗಿಯನ್ನು ಪೂರೈಸಲು ಸಮರ್ಥವಾಗಿದೆ ಎಂದು ಹೇಳಿದರು. 2022-23ರಲ್ಲಿ ಕರ್ನಾಟಕದಲ್ಲಿ 470.29 ಟನ್ ರಾಗಿ/ಜೋಳ, ಹರಿಯಾಣದಲ್ಲಿ 69.19 ಟನ್ ಮತ್ತು ಉತ್ತರಪ್ರದೇಶದಲ್ಲಿ 19.65 ಟನ್ ಬಾಜ್ರಾವನ್ನು ಹಂಚಿಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಡಿನೋಟಿಫಿಕೇಷನ್ಗೆ ಮನವಿ: ಕರ್ನಾಟಕದ ಶರಾವತಿ ಜಲವಿದ್ಯುತ್ ಯೋಜನೆ ವೇಳೆ ನಿರಾಶ್ರಿತರಾದ ಸಾವಿರಾರು ಕುಟುಂಬಗಳು ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡುವಂತೆ ಬಿಜೆಪಿ ಸದಸ್ಯ ಬಿ.ವೈ ರಾಘವೇಂದ್ರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಶಿವಮೊಗ್ಗ ಜಿಲ್ಲೆಯ 31 ವಿವಿಧ ಪ್ರದೇಶಗಳಲ್ಲಿನ ಅರಣ್ಯ ಭೂಮಿಯನ್ನು ಸ್ಥಳಾಂತರಗೊಂಡ ಕುಟುಂಬಗಳು ಸಾಗುವಳಿ ಮಾಡುತ್ತಿವೆ. ಕರ್ನಾಟಕ ಸರ್ಕಾರದಿಂದ ವಿವರವಾದ ಪ್ರಸ್ತಾವನೆ ಪಡೆದು, ರೈತರಿಗೆ ಭೂಮಿಯ ಹಕ್ಕು ಖಚಿತಪಡಿಸಲು ನಿಯಮಗಳಿಗೆ ಅಗತ್ಯತಿದ್ದುಪಡಿ ತಂದು ಡಿನೋಟಿ ಫಿಕೇಷನ್ ಹೊರಡಿಸಬೇಕೆಂದು ಕೋರಿದರು.