ನವದೆಹಲಿ:ಸರಕಾರಿ ಜಾಹೀರಾತುಗಳ ಸೋಗಿನಲ್ಲಿ ಪ್ರಕಟಿಸಿದ ರಾಜಕೀಯ ಜಾಹೀರಾತುಗಳಿಗಾಗಿ ಆಮ್ ಆದ್ಮಿ ಪಕ್ಷದಿಂದ 97 ಕೋಟಿ ರೂ. ವಸೂಲಿ ಮಾಡುವಂತೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ VK Saxena ಮಂಗಳವಾರದಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಮೂಲಕ ದಿಲ್ಲಿ ಸರಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವೆ ಮತ್ತೊಂದು ಸುತ್ತಿನ ಘರ್ಷಣೆ ಕಂಡುಬಂದಿದೆ. ದಿಲ್ಲಿ ಮಹಾನಗರ ಪಾಲಿಕೆಯಲ್ಲಿ ಆಮ್ ಆದ್ವಿ ಪಕ್ಷ(ಎಎಪಿ) ಯಶಸ್ವಿ ಚುನಾವಣಾ ಪ್ರಚಾರವನ್ನು ನಡೆಸಿದ ಕೆಲವು ದಿನಗಳ ನಂತರ ಲೆಫ್ಟಿನೆಂಟ್ ಗವರ್ನರ್ ಈ ಆದೇಶ ನೀಡಿದ್ದಾರೆ.
2015 ರಿಂದ ದಿಲ್ಲಿಯ ವಿಧಾನಸಭೆಯಲ್ಲಿ ಅಧಿಕಾರವನ್ನು ಹೊಂದಿರುವ ಎಎಪಿ, ಈ ತಿಂಗಳ ಆರಂಭದಲ್ಲಿ, ದಿಲ್ಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ನಲ್ಲಿ ಬಿಜೆಪಿಯ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತ್ತು.
ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಜಾಹೀರಾತುಗಳಿಗೆ ಸಂಬಂಧಿಸಿ ಈ ಕ್ರಮ ಕೈಗೊಂಡಿದ್ದಾರೆ. ಏಕೆಂದರೆ ಆಮ್ ಆದ್ಮಿ ಪಕ್ಷವು ಸರಕಾರಿ ಜಾಹೀರಾತಿನಲ್ಲಿನ ವಿಷಯ ನಿಯಂತ್ರಣ ಸಮಿತಿಯು (2016) ನಿಗದಿಪಡಿಸಿದ ಮಾನದಂಡಗಳನ್ನು ಹೊರತುಪಡಿಸಿ ಸುಪ್ರೀಂ ಕೋರ್ಟ್ (2015) ಹಾಗೂ ಹೈಕೋರ್ಟ್ (2016) ಆದೇಶಗಳನ್ನೂ ಉಲ್ಲಂಘಿಸಿದೆ ಎಂದು, ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ದಿಲ್ಲಿ ಸರಕಾರದ ನಿಧಿಯಿಂದ ವೆಚ್ಚ ಮಾಡಿರುವ ಹಣವನ್ನು ಆಮ್ ಆದ್ಮಿ ಪಕ್ಷದಿಂದ ವಸೂಲಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ.