ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುವುದನ್ನು ತಡೆಗಟ್ಟಲು ಕಟ್ಟಡ ನಿರ್ಮಾಣ ಮತ್ತು ಮತ್ತು ನೆಲಸಮ ಚಟುವಟಿಕೆಗಳನ್ನು ನಿಷೇಧಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅತಿ ಹೆಚ್ಚು ಮಾಲಿನ್ಯ ವಿಭಾಗದಿಂದ 'ಅತ್ಯಂತ ಕಳಪೆ' ವಿಭಾಗಕ್ಕೆ ತಗ್ಗಿದೆ.
ಕನಿಷ್ಠ ತಾಪಮಾನವು 17.5 ಡಿಗ್ರಿ ಸೆಲ್ಸಿಯಸ್‌ನಷ್ಟು ವರದಿಯಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಇತ್ತೀಚೆಗೆ ತಿಳಿಸಿತ್ತು.
'ಗಾಳಿಯು ವೇಗವಾಗಿ ಬೀಸುತ್ತಿರುವುದರಿಂದ ಹಾಗೂ ಕಟಾವು ಮಾಡಿರುವ ಪೈರಿನ ಕೂಳೆ ಸುಡುವುದು ಕಡಿಮೆಯಾಗಿರುವುದರಿಂದ ವಾಯು ಗುಣಮಟ್ಟ ಸುಧಾರಣೆ ಕಂಡಿದ್ದು, ದೆಹಲಿಯ ಒಟ್ಟಾರೆ ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 339ರಷ್ಟು ವರದಿಯಾಗಿದೆ' ಎಂದು ಸಿಪಿಸಿಬಿ ಹೇಳಿತ್ತು.
'ಪಂಜಾಬಿ ಬಾಗ್, ಲೋಧಿ ರಸ್ತೆ ಹಾಗೂ ದಿಲ್ಸಾದ್ ಗಾರ್ಡನ್‌ನಲ್ಲಿ ವಾಯು ಗುಣಮಟ್ಟ ಕೊಂಚ ಸುಧಾರಿಸಿದೆ. ಈ ಪ್ರದೇಶಗಳಲ್ಲಿ ಕ್ರಮವಾಗಿ 272, 278 ಹಾಗೂ 284 ಎಕ್ಯೂಐ ದಾಖಲಾಗಿದೆ. ಅಲಿಪುರ, ಶಾದಿಪುರ, ಎನ್‌ಎಸ್‌ಐಟಿ ದ್ವಾರಕಾ, ಡಿಟಿಯು ದೆಹಲಿ, ಐಟಿಒ, ಸಿರಿಫೋರ್ಟ್, ಮಂದಿರ್ ಮಾರ್ಗ್, ಆರ್.ಕೆ.ಪುರಂ ಮತ್ತು ಅಯಾ ನಗರ ಪ್ರದೇಶಗಳಲ್ಲಿ ಗುಣಮಟ್ಟ ಅತ್ಯಂತ ಕಳಪೆಯಾಗಿದೆ' ಎಂದು ಮಾಹಿತಿ ನೀಡಿತ್ತು.