ಲಖನೌ: ಧಾರ್ಮಿಕ ಕ್ಷೇತ್ರ ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿ ಸಂಕೀರ್ಣಕ್ಕೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯಲ್ಲಿ 'ಜಲಾಭಿಷೇಕ' ಮಾಡಲು ಮುಂದಾಗಿದ್ದ ಹಿಂದೂ ಸಂಘಟನೆ ಮುಖಂಡನೊಬ್ಬನನ್ನು ಪೊಲೀಸರು ಸೋಮವಾರ ಬಂಧಿಸಿದರು.
ಮಸೀದಿ ಸಂಕೀರ್ಣದ ಒಳಗೆ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ, 'ಹನುಮಾನ್ ಚಾಲೀಸಾ ಪಠಿಸುತ್ತೇವೆ' ಎಂದು ಘೋಷಿಸಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ನಾಲ್ವರು ಮುಖಂಡರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಲಾಭಿಷೇಕ ಮಾಡಲು ಮುಂದಾಗಿದ್ದ ಮಹಾಸಭಾದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷ ಸೌರವ್ ಶರ್ಮಾ ಅವರನ್ನು ಬಂಧಿಸಲಾಗಿದೆ. ಇನ್ನು ಕೆಲ ಮುಖಂಡರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆದಿದೆ ಎಂದು ತಿಳಿಸಿದ್ದಾರೆ.
ವಿವಾದಿತ ಸ್ಥಳಕ್ಕೆ ತೆರಳುತ್ತಿದ್ದ ಇನ್ನೂ ಕೆಲ ಮುಖಂಡರನ್ನು ಬಂಧಿಸಿದ್ದು, ಗೃಹಬಂಧನದಲ್ಲಿ ಇರಿಸಲಾಗಿದೆ. ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಸಂಕೀರ್ಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದಿದ್ದಾರೆ.
ವಿವಾದಿತ ಸ್ಥಳದ ಮಾಲೀತ್ವ ತಮಗೇ ಸೇರಬೇಕು ಎಂದು ಕೋರಿ ಮಥುರಾದ ಜಿಲ್ಲಾ ಕೋರ್ಟ್‌ಗೆ ಎಂಟು ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲವನ್ನು ಹಿಂದೂ ಸಂಘಟನೆಗಳೇ ಸಲ್ಲಿಸಿವೆ. ವಿವಾದಿತ ಸಂಕೀರ್ಣ ಒಳಗೊಂಡು 13.37 ಎಕರೆ ಭೂಮಿ ನಮಗೆ ಸೇರಬೇಕು ಎಂಬುದು ಅರ್ಜಿದಾರರ ವಾದ. ಮಸೀದಿ ಸಮಿತಿ ಮತ್ತು ಜನ್ಮಭೂಮಿ ಟ್ರಸ್ಟ್ ನಡುವಣ ಒಪ್ಪಂದದ ಸಿಂಧುತ್ವವನ್ನೂ ಪ್ರಶ್ನಿಸಲಾಗಿದೆ.
ರಾಮಮಂದಿರ ಅಭಿಯಾನ ವ್ಯಾಪಿಸಲು ಕಾರಣವಾಗಿದ್ದ ವಿಶ್ವಹಿಂದೂ ಪರಿಷತ್ (ವಿಎಚ್‌ಪಿ) 2024ರಲ್ಲಿ ಶ್ರೀಕೃಷ್ಣ ಜನ್ಮಭೂಮಿ ವಿಷಯವನ್ನು ಹೋರಾಟಕ್ಕೆ ಎತ್ತಿಕೊಳ್ಳಲಾಗುವುದು ಎಂದು ಈಗಾಗಲೇ ಘೋಷಿಸಿದೆ.