ನವದೆಹಲಿ: ಜೀವವೈವಿಧ್ಯ ನಾಶವನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಪರಿಣಾಮಕಾರಿ ಜಾರಿಗೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗುವ ಸಲುವಾಗಿ ಹೊಸ ಹಾಗೂ ಇದೇ ಉದ್ದೇಶಕ್ಕಾಗಿಯೇ ಮೀಸಲಾದ ನಿಧಿ ಸ್ಥಾಪಿಸುವ ಅಗತ್ಯ ಇದೆ ಎಂದು ಭಾರತ ಪ್ರತಿಪಾದಿಸಿದೆ.
ಕೆನಡಾದ ಮಾಂಟ್ರಿಯಲ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಜೀವವೈವಿಧ್ಯ (ಸಿಬಿಡಿ ಸಿಒಪಿ15) ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್, 'ಜಾಗತಿಕ ಜೀವವೈವಿಧ್ಯ ಚೌಕಟ್ಟಿನ (ಜಿಬಿಎಫ್) ಪರಿಣಾಮಕಾರಿ ಅನುಷ್ಠಾನವು ಸಂಪನ್ಮೂಲಗಳ ಕ್ರೋಡೀಕರಣ ಹಾಗೂ ಅವುಗಳ ಬಳಸುವ ವಿಧಾನವನ್ನು ಅವಲಂಬಿಸಿದೆ' ಎಂದರು.
'ಸಿಬಿಡಿ ಸಿಒಪಿ15' ಡಿ. 7ರಂದು ಆರಂಭವಾಗಿದ್ದು, ಮಂಗಳವಾರ (ಡಿ.20) ಮುಕ್ತಾಯಗೊಳ್ಳುವುದು.
'ಜೀವವೈವಿಧ್ಯದ ಸಂರಕ್ಷಣೆಯು ಎಲ್ಲ ದೇಶಗಳ ಜವಾಬ್ದಾರಿ. ಆದರೆ, ಈ ಜವಾಬ್ದಾರಿಯು ಆಯಾ ರಾಷ್ಟ್ರಗಳ ಸಾಮರ್ಥ್ಯಗಳಿಗೆ ಅನುಗುಣವಾಗಿ ಹಂಚಿಕೆಯಾಗಬೇಕು' ಎಂದೂ ಅವರು ಹೇಳಿದರು.
'ಜಾಗತಿಕ ಜೀವವೈವಿಧ್ಯ ಚೌಕಟ್ಟಿನ ಪರಿಣಾಮಕಾರಿ ಅನುಷ್ಠಾನವನ್ನು ಖಾತರಿಪಡಿಸುವ ಸಲುವಾಗಿ ಈ ಹೊಸ ನಿಧಿಯನ್ನು ತ್ವರಿತವಾಗಿ ಸ್ಥಾಪಿಸಿ, ಬಳಕೆಗೆ ಚಾಲನೆ ನೀಡಬೇಕು' ಎಂದು ಅವರು ಪ್ರತಿಪಾದಿಸಿದರು.