ನವದೆಹಲಿ: ಕಳೆದ ವರ್ಷ ಡಿಸೆಂಬರ್ನಲ್ಲಿ ಲುಧಿಯಾನ ಕೋರ್ಟ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಹಿಂದಿನ ಮುಖ್ಯ ಪಿತೂರಿಗಾರನನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ತಿಳಿಸಿದೆ.
ಹೊಸದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಆರೋಪಿ ಹರ್ಪೀತ್ ಸಿಂಗ್ನನ್ನು ಬಂಧಿಸಲಾಯಿತು.ಈ ಹಿಂದೆ ಎನ್‌ಐಎ ಹರ್ಪ್ರೀತ್ ಸಿಂಗ್ ಬಗ್ಗೆ ಸುಳಿವು ನೀಡಿದರೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು.
ಈ ಬಾಂಬ್ ಸ್ಪೋಟದ ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದ ಹಾಗೂ ಐವರು ಗಾಯಗೊಂಡಿದ್ದರು. ನ್ಯಾಯಾಲಯದ ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ಶೌಚಾಲಯದಲ್ಲಿ ಮೃತಪಟ್ಟ ವ್ಯಕ್ತಿ ಸ್ಫೋಟಕ ಸಾಧನವನ್ನು ಜೋಡಿಸಲು ಅಥವಾ ಇರಿಸಲು ಪ್ರಯತ್ನಿಸಿದ್ದ ಎಂಬುದು ತಮ್ಮ ಶಂಕೆ ಎಂದು ಪೊಲೀಸರು ತಿಳಿಸಿದ್ದರು.
ಅಂತರ್ ರಾಷ್ಟ್ರೀಯ ಸಿಕ್ಖ್ ಯುವ ಒಕ್ಕೂಟದ ಪಾಕಿಸ್ತಾನ ಮೂಲದ ಮುಖ್ಯಸ್ಥ ಲಕ್ಬೀರ್ ಸಿಂಗ್ ರೋಡೆಯೊಂದಿಗೆ ಇದ್ದ ಹರ್ಪ್ರೀತ್ ಸಿಂಗ್ ಈ ಸ್ಫೋಟ ಪ್ರಕರಣದಲ್ಲಿ ಮುಖ್ಯ ಪಿತೂರಿಗಾರನಾಗಿದ್ದಾನೆ ಎಂದು ಎನ್‌ಐಎ ವಕ್ತಾರ ತಿಳಿಸಿದ್ದಾರೆ.