ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಇಂಧನ, ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರ ಒಪ್ಪಂದದ ಕುರಿತು ಚರ್ಚಿಸಿದ್ದಾರೆ.
ಉಕ್ರೇನ್ ಜೊತೆಗಿನ ರಷ್ಯಾ ಬಿಕ್ಕಟ್ಟಿನ ಕುರಿತಾಗಿಯೂ ಚರ್ಚಿಸಿರುವ ಮೋದಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದೊಂದೇ ಉತ್ತಮ ಮಾರ್ಗ ಎಂದು ಪುಟಿನ್‌ಗೆ ಪುನರುಚ್ಚರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆಯ ಕುರಿತು ಪುಟಿನ್‌ಗೆ ವಿವರಿಸಲಾಗಿದ್ದು, ಭಾರತ ತನ್ನ ಪ್ರಮುಖ ಆದ್ಯತೆಗಳನ್ನು ಚರ್ಚಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
'ಸಮರ್‌ಖಂಡ್‌ನಲ್ಲಿನ ಶಾಂಘೈ ಸಹಕಾರ ಒಕ್ಕೂಟದ(ಎಸ್‌ಸಿಒ) ಶೃಂಗಸಭೆಯಲ್ಲಿನ ಮಾತುಕತೆ ಮುಂದುವರಿದ ಭಾಗವಾಗಿ ಉಭಯ ನಾಯಕರು ದ್ವಿಪಕ್ಷೀಯ ಒಪ್ಪಂದದ ಹಲವು ಆಯಾಮಗಳನ್ನು ಪರಾಮರ್ಶಿಸಿದ್ದಾರೆ. ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆಯಲ್ಲಿ ಒಟ್ಟಾಗಿ ಕೆಲಸ ಮಾಡಲು ಉಭಯ ನಾಯಕರು ಸಮ್ಮತಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಮೋದಿ ಈ ಸಲ ವಾರ್ಷಿಕ ಭೇಟಿಗಾಗಿ ರಷ್ಯಾಗೆ ಪ್ರವಾಸ ಮಾಡುತ್ತಿಲ್ಲ ಎಂಬ ಸುದ್ದಿ ಹೊರಬಿದ್ದ ಮರುದಿನವೇ ಈ ದೂರವಾಣಿ ಚರ್ಚೆ ನಡೆದಿದೆ. ಪುಟಿನ್ ಹಿಂದಿನ ವರ್ಷ ಭಾರತಕ್ಕೆ ಭೇಟಿ ನೀಡಿದ್ದರು.