HEALTH TIPS

ಜೀವವೈವಿಧ್ಯ ಸಂರಕ್ಷಣೆಯ ಕಡೆ ಒಂದು ಹೆಜ್ಜೆ ಮುಂದಿರಿಸಿದ ವಿಶ್ವ

 

              ಕೆನಡಾದ ಮಾಂಟ್ರಿಯಲ್‌ನಲ್ಲಿ ಈಚೆಗೆ ನಡೆದ ವಿಶ್ವಸಂಸ್ಥೆಯ ಜೀವವೈವಿಧ್ಯ ಸಮಾವೇಶದಲ್ಲಿ ಒಪ್ಪಂದ ವೊಂದಕ್ಕೆ ವಿವಿಧ ದೇಶಗಳು ಸಹಿ ಮಾಡಿವೆ. ವಿಶ್ವದ ಸಸ್ಯಸಂಪತ್ತು ಹಾಗೂ ಪ್ರಾಣಿಸಂಪತ್ತು ಇನ್ನಷ್ಟು ಹಾಳಾಗಬಾರದು ಎಂಬ ಉದ್ದೇಶವನ್ನು ಇರಿಸಿಕೊಂಡು ನಡೆಸಿದ ಮಾತುಕತೆಗಳ ಅಂತಿಮ ರೂಪವಾಗಿ ದೇಶಗಳು ಈ ಸಹಿ ಹಾಕಿವೆ.

                 ಹವಾಮಾನ ಬದಲಾವಣೆಯನ್ನು ತಡೆಯುವ ಉದ್ದೇಶದಿಂದ ಮಾಡಿಕೊಂಡ ಪ್ಯಾರಿಸ್‌ ಒಪ್ಪಂದಕ್ಕೆ ಈ ಒಪ್ಪಂದವನ್ನು ಹೋಲಿಸಿ ನೋಡಲಾಗುತ್ತಿದೆ. ಹೀಗಿದ್ದರೂ ಇದು ಹೆಚ್ಚು ಜನರ ಗಮನ ಸೆಳೆದಿಲ್ಲ. ಮನುಷ್ಯನ ಮೇಲೆ ಹೆಚ್ಚಿನ ಪರಿಣಾಮ ಬೀರುವುದು ಹವಾಮಾನ ಬದಲಾವಣೆಯೇ ವಿನಾ, ಜೀವವೈವಿಧ್ಯದ ನಾಶವು ಹೆಚ್ಚು ಪರಿಣಾಮ ಉಂಟುಮಾಡುವುದಿಲ್ಲ ಎಂಬ ತಪ್ಪುಗ್ರಹಿಕೆಯ ಕಾರಣದಿಂದಾಗಿ ಈ ಒಪ್ಪಂದವು ಹೆಚ್ಚು ಜನರ ಗಮನ ಸೆಳೆದಿಲ್ಲದಿರಬಹುದು.

                 ಸಸ್ಯಸಂಕುಲ, ಪ್ರಾಣಿಗಳು- ಕ್ರಿಮಿಕೀಟಗಳು ಕಣ್ಮರೆಯಾಗಿರುವುದು ಚಂಡಮಾರುತಗಳು ಹಾಗೂ ಅತಿವೃಷ್ಟಿಯಂತೆ ಎದ್ದು ಕಾಣುವುದಿಲ್ಲ. ಆದರೆ ಜೀವವೈವಿಧ್ಯವು ನಾಶವಾಗುತ್ತಿರುವುದರ ಪರಿಣಾಮಗಳ ಬಗ್ಗೆ ಬಹುಕಾಲದಿಂದ ಚರ್ಚೆ ನಡೆದಿದೆ ಎಂಬುದು ನಿಜ. ಒಟ್ಟು 196 ದೇಶಗಳು ಈಗ ಈ ಒಪ್ಪಂದಕ್ಕೆ ಸಹಿ ಮಾಡಿವೆ. 2030ರೊಳಗೆ ಭೂಮಿಯ ಶೇಕಡ 30ರಷ್ಟು ನಿಸರ್ಗವನ್ನು ರಕ್ಷಿಸಲು ಕ್ರಮ ಕೈಗೊಳ್ಳುವ, ನಿಸರ್ಗದ ಮೇಲೆ ಕೆಟ್ಟ ಪರಿಣಾಮ ಬೀರುವ ಸಬ್ಸಿಡಿ ಗಳನ್ನು ಪ್ರತಿವರ್ಷ 500 ಬಿಲಿಯನ್‌ ಡಾಲರ್‌ಗಳಷ್ಟು (ಸರಿಸುಮಾರು ₹ 41 ಲಕ್ಷ ಕೋಟಿ) ಕಡಿಮೆ ಮಾಡುವ ಹಾಗೂ ಈಗಾಗಲೇ ಹಾಳಾಗಿರುವ ಪರಿಸರ ವ್ಯವಸ್ಥೆಯ ಶೇಕಡ 30ರಷ್ಟನ್ನು ಸರಿಪಡಿಸುವ ಅಂಶಗಳು ಈ ಒಪ್ಪಂದದಲ್ಲಿ ಇವೆ.

                 ಜೀವಿಗಳ ಸಾಮೂಹಿಕ ಅಂತರ್ಧಾನವನ್ನು ಈ ಭೂಮಿಯು ಈಗಾಗಲೇ ಐದು ಬಾರಿ ಕಂಡಿದೆ ಎನ್ನಲಾಗಿದೆ. ಭೂಮಿಯು ತನ್ನ ಮೇಲಿನ ಜೀವಿಗಳು ಮತ್ತೊಮ್ಮೆ ಸಂಪೂರ್ಣವಾಗಿ ಅಳಿದುಹೋಗುವ ಸ್ಥಿತಿಯತ್ತ ಮತ್ತೆ ಸಾಗುತ್ತಿದೆ ಎಂಬ ವಾದ ಇದೆ. ಭೂಮಿಯ ಮೇಲ್ಮೈನಲ್ಲಿ ಹಾಗೂ ಸಮುದ್ರದಲ್ಲಿ ಒಟ್ಟು ಸರಿಸುಮಾರು ಹತ್ತು ಲಕ್ಷ ಜೀವಿಗಳು ಅಳಿವಿನಂಚಿನಲ್ಲಿವೆ ಎನ್ನಲಾಗಿದೆ. ಜೀವಿಗಳು ಅಳಿದುಹೋಗುವ ಪ್ರಮಾಣವು ಕಳೆದ ಐವತ್ತು ವರ್ಷಗಳಲ್ಲಿ ವೇಗ ಪಡೆದುಕೊಂಡಿದೆ. ಕೈಗಾರಿಕೆ ಹಾಗೂ ಕೃಷಿ ಚಟುವಟಿಕೆಗಳ ಕಾರಣದಿಂದಾಗಿ ಕಾಡು ಭಾರಿ ಪ್ರಮಾಣದಲ್ಲಿ ನಾಶವಾಗಿದೆ. ವಿಶ್ವದ ಶೇ 40ರಷ್ಟು ಜಮೀನು ಗುಣಮಟ್ಟ ಕಳೆದುಕೊಂಡಿದೆ. ನಷ್ಟವನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಏಕೆಂದರೆ ಒಮ್ಮೆ ನಾಶವಾಗಿರುವುದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಇತರ ಜೀವಿಗಳು ಹಾಗೂ ಇಡೀ ನಿಸರ್ಗವನ್ನು ಆಧರಿಸಿ ನಿಂತಿದೆ ಮನುಷ್ಯನ ಜೀವನ. ಅವು ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಮನುಷ್ಯನ ಬದುಕೂ ಸುಸ್ಥಿತಿಯಲ್ಲಿ ಇರಲಾರದು. ವಿಶ್ವವು 2030ರೊಳಗೆ ನಾಲ್ಕು ಪ್ರಮುಖ ಗುರಿಗಳನ್ನು ಈಡೇರಿಸಬೇಕು, 23 ಕಿರು ಗುರಿಗಳನ್ನು ಈಡೇರಿಸಬೇಕು ಎಂಬ ನಿಬಂಧನೆಯು ಒಪ್ಪಂದದ ಭಾಗ. ಭೂಮಿ ಹಾಗೂ ಸಮುದ್ರದ ಶೇ 30ರಷ್ಟು ಭಾಗವನ್ನು 2030ರೊಳಗೆ ರಕ್ಷಿಸಬೇಕು ಎಂಬುದು ಪ್ರಮುಖ ಗುರಿಗಳ ಪೈಕಿ ಒಂದು. ಈಗ ಭೂಮಿಯ ಶೇ 17ರಷ್ಟು ಹಾಗೂ ಸಮುದ್ರದ ಶೇ 8ರಷ್ಟು ಮಾತ್ರ ಸಂರಕ್ಷಿತವಾಗಿದೆ. ಸಂರಕ್ಷಣೆಯ ಉದ್ದೇಶಕ್ಕೆ ವಾರ್ಷಿಕ 200 ಬಿಲಿಯನ್ ಡಾಲರ್ (₹ 16.52 ಲಕ್ಷ ಕೋಟಿ) ಹಣವನ್ನು ಒಗ್ಗೂಡಿಸುವ ಅಂಶವೂ ಒಪ್ಪಂದದ ಭಾಗ. ರಾಷ್ಟ್ರೀಯ ಜೀವವೈವಿಧ್ಯ ಯೋಜನೆಗಳನ್ನು ಹಮ್ಮಿಕೊಳ್ಳುವ ಪ್ರಸ್ತಾವ ಕೂಡ ಒಪ್ಪಂದದಲ್ಲಿ ಇದೆ. ಹವಾಮಾನ ಬದಲಾವಣೆಯನ್ನು ತಡೆಯುವ ಉದ್ದೇಶದೊಂದಿಗೆ ರಾಷ್ಟ್ರಮಟ್ಟದಲ್ಲಿ ಕೆಲವು ಕಾರ್ಯತಂತ್ರಗಳನ್ನು ಹಮ್ಮಿಕೊಳ್ಳುವಂತಹ ರೀತಿಯವು ಇವು.

                 ಆದರೆ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವ ಹಾಗೂ ಕೃಷಿ ಸಬ್ಸಿಡಿಗಳನ್ನು ಕಡಿಮೆ ಮಾಡುವ ಅಂಶಗಳು ವಿವಾದಕ್ಕೆ ಎಡೆಮಾಡಿಕೊಡುವಂತೆ ಇವೆ. ಕೀಟನಾಶಕಗಳ ಬಳಕೆ ಕಡಿಮೆ ಮಾಡುವ ವಿಚಾರದಲ್ಲಿ ಗುರಿ ನಿಗದಿ ಮಾಡುವುದರ ಪರವಾಗಿ ಭಾರತ ಇರಲಿಲ್ಲ. ಬೇರೆ ಬೇರೆ ದೇಶಗಳಿಗೆ ಇರುವ ಜವಾಬ್ದಾರಿ ಮಟ್ಟ ಬೇರೆ ಬೇರೆ ರೀತಿಯದ್ದು. ಹಾಗಾಗಿ, ಜೀವವೈವಿಧ್ಯ ಸಂರಕ್ಷಣೆಯ ವಿಚಾರದಲ್ಲಿಯೂ ಬೇರೆ ಬೇರೆ ಕಾರ್ಯತಂತ್ರಗಳನ್ನು ಅವು ರೂಪಿಸಬಹುದು ಎಂದು ಭಾರತ ವಾದಿಸಿತ್ತು. ಇದಲ್ಲದೆ, ಬೇರೆ ಅಭಿಪ್ರಾಯಗಳೂ ಇದ್ದವು. ಆಫ್ರಿಕಾ ಖಂಡದ ದೇಶಗಳು, ಅದರಲ್ಲೂ ಮುಖ್ಯವಾಗಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್‌ ಕಾಂಗೊ ದೇಶವು ಒಪ್ಪಂದದ ಆರ್ಥಿಕ ಆಯಾಮಗಳ ಬಗ್ಗೆ ತಕರಾರು ತೆಗೆದಿದೆ. ಆರ್ಥಿಕ ವಿಚಾರ ಮಾತ್ರವಲ್ಲದೆ ಆ ದೇಶವು ಇತರ ಕೆಲವು ಅಂಶಗಳ ಬಗ್ಗೆಯೂ ಆಕ್ಷೇಪಗಳನ್ನು ವ್ಯಕ್ತಪಡಿಸಿದೆ. ಒಪ್ಪಂದವನ್ನು ತಮ್ಮ ಮೇಲೆ ಹೇರಲಾಗಿದೆ ಎಂದು ಆಫ್ರಿಕಾದ ಕೆಲವು ದೇಶಗಳು ದೂರಿವೆ. ಅಮೆರಿಕವು ಈ ಒಪ್ಪಂದದಲ್ಲಿ ಇಲ್ಲ. ಒಪ್ಪಂದವನ್ನು ಪಾಲಿಸಲೇಬೇಕು ಎಂಬ ಕಾನೂನು ಇಲ್ಲ. ಇವೆಲ್ಲ ಏನೇ ಇದ್ದರೂ, ಈ ಒಪ್ಪಂದವು ಒಂದು ಹೆಜ್ಜೆ ಮುಂದಿರಿಸಿರುವುದಕ್ಕೆ ಸಮ. ಆಡಳಿತ, ನೀತಿಗಳು ಮತ್ತು ರಾಜಕಾರಣವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ಇದು ತೋರಿಸಿಕೊಡುತ್ತದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries