ಕಣ್ಣೂರು: ಮದುವೆಯಾದ ಹೊಸತರಲ್ಲಿ ನವ ಜೋಡಿಗಳು ವಿಶೇಷವಾದ ಜಾಗಕ್ಕೆ ಹನಿಮೂನ್ ಹೋಗುತ್ತಾರೆ. ಹನಿಮೂನ್ ಎಂದು ವಿದೇಶ ಸುತ್ತಾಟ ಮಾಡುವವರ ಸಂಖ್ಯೆ ಹೆಚ್ಚಿದೆ. ಈಗಂತೂ ಮಾಲ್ಡೀವ್ಸ್ ಕಡಲ ಕಿನಾರೆ ನವ ವಿವಾಹಿತರ ಹನಿಮೂನ್ ಜಾಗವಾಗಿ ಮಾರ್ಪಾಡಾಗಿದೆ. ಹೊಸದಾಗಿ ಯಾರೇ ಮದುವೆ ಆದರೂ ಹನಿಮೂನ್ ಮಾತ್ರ ಮಾಲ್ಡೀವ್ಸ್ಗೆ ಎಂಬಂತಾಗಿದೆ.
ಇನ್ನು ಕೆಲವು ಜೋಡಿಗಳು ಮದುವೆಯಾದ ಹೊಸತರಲ್ಲಿ ಹನಿಮೂನ್ ಪ್ರವಾಸವನ್ನು ಸ್ಮರಣೀಯವಾಗಿರಿಸಲು ವಿಭಿನ್ನ ಮಾದರಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಇದೀಗ ರಷ್ಯಾ ದೇಶದ ನವ ಜೋಡಿಗಳು ಕೇರಳದ ಕಣ್ಣೂರಿಗೆ ಬಂದಿದ್ದಾರೆ. ವಿಭಿನ್ನ ಆಲೋಚನೆ ಇಟ್ಟುಕೊಂಡೇ ದೂರದ ರಷ್ಯಾದಿಂದ ಭಾರತಕ್ಕೆ ಆಗಮಿಸಿದ್ದಾರೆ. ಇದೀಗ ಈ ಜೋಡಿ ಕಣ್ಣೂರಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಇವರಿಬ್ಬರ ಕೃಷಿ ಕೆಲಸವನ್ನು ನೋಡಿದ ಸ್ಥಳೀಯರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ರಷ್ಯಾ ಮೂಲದ 24 ವರ್ಷದ ಸೇಂಟ್ ಪೀಟರ್ಸ್‌ಬರ್ಗ್‌ನ ಬೊಗ್ಡಾನ್ ಡ್ವೊರೊವಿ ಮತ್ತು ಅಲೆಕ್ಸಾಂಡ್ರಾ ಚೆಬ್ಬೊಟರೆವಾ ಭಾರತದ ಸಾವಯವ ಕೃಷಿ ಪದ್ಧತಿಗೆ ಮಾರು ಹೋಗಿದ್ದಾರೆ. ಹೀಗಾಗಿ ತಮ್ಮ ಹನಿಮೂನ್ನನ್ನು ಸ್ಮರಣೀಯವಾಗಿ ಆಚರಿಸಲು ಕಣ್ಣೂರಿನ ಪುಟ್ಟ ಹಳ್ಳಿಯಾದ ಆದಿಕದಲೈಗೆ ಬಂದು ನೆಲೆಸಿದ್ದಾರೆ. ಎರಡು ವಾರಗಳಿಂದ ಕಣ್ಣೂರಿನಲ್ಲಿರುವ ಈ ದಂಪತಿ ಇದೀಗ, ಕಳೆ ಕೀಳುವ ಕೆಲಸ, ಸಗಣಿ ವಿಲೇವಾರಿ, ಕೋಳಿ ಗೊಬ್ಬರ ಹಾಕುವುದು ಸೇರಿದಂತೆ ಎಲ್ಲಾ ಮಾದರಿಯ ಕೃಷಿ ಕೆಲಸ ಮಾಡುತ್ತಿದ್ದಾರೆ.
ಡ್ವೊರೊವಿ ಮತ್ತು ಅಲೆಕ್ಸಾಡ್ರಿಯಾ ಇಬ್ಬರೂ ಪದವೀಧರರು. ಅಕ್ಟೋಬರ್ನಲ್ಲಿ ಪ್ರೀತಿಸಿ ವಿವಾಹವಾಗಿದ್ದಾರೆ. ವಿವಿಧ ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡುವುದು ನಮ್ಮ ಉದ್ಧೇಶ ಎಂದು ದಂಪತಿ ಹೇಳಿಕೊಂಡಿದ್ದಾರೆ.
ಕಣ್ಣೂರಿನ ಆದಿಕದಲೈ ಹಳ್ಳಿಯಲ್ಲಿನ ಹ್ಯಾರಿಸ್ ಎಂಬುವವರ ಕೃಷಿ ತೋಟದಲ್ಲಿ ಈ ನವ ಜೋಡಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ಮಾರ್ಚ್ ತಿಂಗಳಿನಲ್ಲಿ ರಷ್ಯಾ ದಂಪತಿ ಮತ್ತೆ ತಮ್ಮ ದೇಶಕ್ಕೆ ಹಿಂತಿರುಗುವುದಾಗಿ ಹೇಳಿಕೊಂಡಿದ್ದಾರೆ.