ನವದೆಹಲಿ: ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮತ್ತೆ ಜಾರಿಗೊಳಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ಲೋಕಸಭೆಗೆ ತಿಳಿಸಿದ್ದಾರೆ.
ರಾಜಸ್ಥಾನ, ಛತ್ತೀಸಗಢ ಮತ್ತು ಜಾರ್ಖಂಡ್ ರಾಜ್ಯಗಳು ತಮ್ಮ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ/ಪಿಂಚಣಿ ನಿಧಿ ನಿರ್ವಹಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಪಿಎಫ್‌ಆರ್‌ಡಿಎ) ಮಾಹಿತಿ ನೀಡಿವೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಅಡಿ ಸಂಗ್ರಹ ಆಗಿರುವ ಮೊತ್ತವನ್ನು ಹಿಂದಿರುಗಿಸುವಂತೆಯೂ ಕೇಳಿವೆ. ಆದರೆ, ಎನ್‌ಪಿಎಸ್‌ನಲ್ಲಿ ಇರುವ ಹಣವನ್ನು ರಾಜ್ಯ ಸರ್ಕಾರಗಳಿಗೆ ಹಿಂದಿರುಗಿಸಲು ಪಿಎಫ್‌ಆರ್‌ಡಿಎ ಕಾಯ್ದೆ 2013ರ ಅಡಿಯಲ್ಲಿ ಅವಕಾಶ ಇಲ್ಲ ಎಂದು ಪ್ರಾಧಿಕಾರವು ಸಂಬಂಧಪಟ್ಟ ರಾಜ್ಯಗಳಿಗೆ ಸೂಚನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಪಂಜಾಬ್ ಸರ್ಕಾರವು ನವೆಂಬರ್ 18ರಂದು ಅಧಿಸೂಚನೆ ಹೊರಡಿಸಿದೆ. ಆದರೆ, ಎನ್‌ಪಿಎಸ್‌ನಲ್ಲಿ ಇರುವ ಹಣವನ್ನು ಹಿಂದಿರುಗಿಸುವಂತೆ ಪಂಜಾಬ್ ಸರ್ಕಾರದಿಂದ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಎನ್‌ಪಿಎಸ್ 2004ರಿಂದ ಜಾರಿಯಲ್ಲಿದೆ.