ನವದೆಹಲಿ:ದಿಲ್ಲಿ ಹಿಂಸಾಚಾರ ಸಂಚು ರೂಪಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟಿನ ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಅವರು ಮಹತ್ವದ ಮಾತುಗಳನ್ನಾಡಿದ್ದಾರೆ.
ಶುಕ್ರವಾರ ಶಾರ್ಜೀಲ್ ಇಮಾಮ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಸುದೀರ್ಘ ಜಾಮೀನು ಅರ್ಜಿಗಳನ್ನು ಸಲ್ಲಿಸುವ ಮತ್ತು ಅಂತಿಮ ಅಪರಾಧ ಸಾಬೀತಾಗಿರುವಂತೆ ವಾದಿಸುವ ಅಭ್ಯಾಸಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
"ನನ್ನ ಅಭಿಪ್ರಾಯದ ಪ್ರಕಾರ ಪುಟಗಟ್ಟಲೆ ಇರುವ ಜಾಮೀನು ಅರ್ಜಿಗಳನ್ನು ಪರಾಮರ್ಶಿಸುವುದು ನ್ಯಾಯಾಲಯದ ಸಮಯ ಪೋಲು ಮಾಡಿದಂತೆ," ಎಂದು ಅವರು ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರ ನಂತರ ಸುಪ್ರೀಂ ಕೋರ್ಟಿನ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ ಸಂಜಯ್ ಕೌಲ್.
ಸಹ-ಆರೋಪಿ ಉಮರ್ ಖಾಲಿದ್‌ಗೆ ಈ ಹಿಂದೆ ಜಾಮೀನು ನಿರಾಕರಿಸುವ ವೇಳೆ ದಿಲ್ಲಿ ಹೈಕೋರ್ಟ್ ಇಮಾಮ್ ಅವರನ್ನು ʻಮುಖ್ಯ ಸಂಚುಕೋರʼ ಎಂದು ಉಲ್ಲೇಖಿಸಿರುವುದಕ್ಕೆ ಆಕ್ಷೇಪಿಸಿ ಆ ಮಾತುಗಳನ್ನು ದಾಖಲೆಗಳಿಂದ ತೆಗೆದುಹಾಕಬೇಕೆಂದು ಶರ್ಜೀಲ್ ಇಮಾಮ್ ತಮ್ಮ ಅರ್ಜಿಯಲ್ಲಿ ಹೇಳಿದ್ದರು.
ನ್ಯಾಯಾಲಯಕ್ಕೆ ಸಲ್ಲಿಸುವ ಅರ್ಜಿಗಳಂತೆ ಜಾಮೀನು ಅರ್ಜಿಗಳು ದೀರ್ಘವಾಗಿದ್ದರೆ ಇದೇ ಆಗುವುದು ಎಂದು ಜಸ್ಟಿಸ್ ಕೌಲ್ ಹೇಳಿದರು.
ಆ ನಿರ್ದಿಷ್ಟ ಕೇಸಿನ ಭಾಗವಾಗಿ ತಾನಿಲ್ಲದೇ ಇದ್ದರೂ ತನ್ನ ಬಗ್ಗೆ ನ್ಯಾಯಾಧೀಶರು ಆಡಿದ ಮಾತುಗಳು ಸರಿಯಲ್ಲ ಹಾಗೂ ಸುಪ್ರೀಂ ಕೋರ್ಟ್ ಸೂಚನೆಗಳಿಗೆ ವಿರುದ್ಧವಾಗಿದೆ ಎಂದು ಶರ್ಜೀಲ್ ತಮ್ಮ ಅಪೀಲಿನಲ್ಲಿ ಹೇಳಿದ್ದರು.