ಮಧೂರು: ಸಮರ್ಥ ನಾಯಕತ್ವದಡಿಯಲ್ಲಿ ಭಾರತವು ಸುಭದ್ರವಾಗಿದೆ. ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಜಾಗತಿಕ ಮಟ್ಟದಲ್ಲಿ ಭಾರತವು ಮಾನ್ಯತೆಯನ್ನು ಪಡೆದಿದೆ. ಕೋವಿಡ್ ನಂತರ ಮಾನವೀಯತೆಯ ಮೂಲಕ ವಿಶ್ವದ ಜನರ ರಕ್ಷಣೆಗಾಗಿಯೂ ಭಾರತ ಕೈಗೊಂಡ ಕಾರ್ಯ ನಮಗೆ ಹೆಮ್ಮೆಯ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಸಂಘಟನೆಯ ಮೂಲಕ ನಾವು ಮತ್ತಷ್ಟು ಪ್ರಬಲರಾಗಬೇಕಿದೆ. ಪಿಂಚಣಿದಾರರ ಸಂಘಟನೆಯ ಕಾಸರಗೋಡು ಘಟಕವು ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘದ ರಾಜ್ಯ ಅಧ್ಯಕ್ಷ ಸದಾನಂದನ್ ಹೇಳಿದರು.
ಉಳಿಯತ್ತಡ್ಕ ಶಕ್ತಿ ಸಭಾ ಭವನದಲ್ಲಿ ಮಂಗಳವಾರ ಜರಗಿದ ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘ್ ಕಾಸರಗೋಡು ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲೇ ಅತೀ ಹೆಚ್ಚು ಮಹಿಳೆಯರು ಇಲ್ಲಿ ಸಂಘಟಿತರಾಗಿ ನಮ್ಮೊಂದಿಗೆ ಕೈಜೋಡಿಸಿರುವುದು ಸಂತಸದ ವಿಚಾರವಾಗಿದೆ. ದೇಶವು ಅಭಿವೃದ್ಧಿಯನ್ನು ಕಾಣುತ್ತಿದ್ದರೆ ನಮ್ಮ ರಾಜ್ಯವು ಅಧೋಗತಿಯತ್ತ ಸಾಗುತ್ತಿದೆ. ಕೇಂದ್ರ ಸರ್ಕಾರದ ಔದಾರ್ಯದಿಂದಾಗಿ ಕೇರಳ ರಾಜ್ಯ ಸರ್ಕಾರವು ಅಸ್ತಿತ್ವದಲ್ಲಿದೆ ಎಂದರು.
ಜಿಲ್ಲಾ ಅಧ್ಯಕ್ಷ ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೆರ್ಲ ನಾಲಂದ ಕಾಲೇಜು ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಮಾನ ಆಸಕ್ತರು ಜೊತೆಗೂಡಿ ನಿರ್ದಿಷ್ಟ ಉದ್ದೇಶಗಳನ್ನು ಸಾಕಾರಗೊಳಿಸಲು ಸಂಘಟನೆ ಅಗತ್ಯವಿದೆ. ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆ ಸದಸ್ಯರು ಕೈಜೋಡಿಸಿದಾಗ ಸಂಘಟನೆ ಬೆಳೆಯುತ್ತದೆ. ವ್ಯಕ್ತಿಗತವಾಗಿ ಸಾಸಲು ಸಾಧ್ಯವಾಗದಿರುವುದನ್ನು ಸಂಘಟನೆಯ ಮೂಲಕ ಸಾಧಿಸಲು ಸಾಧ್ಯವಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಈಶ್ವರ ರಾವ್, ಬಿಎಂಎಸ್ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸನ್, ಎನ್.ಟಿ.ಯು. ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ, ಕೆ.ಜಿ.ಒ ಸಂಘ್ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಕುಂಟಾರು ಶುಭಾಶಂಸನೆಗೈದರು. ಜಿಲ್ಲಾ ಉಸ್ತುವಾರಿ ರಾಜ್ಯ ಪ್ರತಿನಿಧಿ ಸುಧೀರ್ ಯಜ್ಞದಾಸ್ ನೇತೃತ್ವದಲ್ಲಿ ಸಂಘಟನಾ ಚರ್ಚೆಯಲ್ಲಿ ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ವಿಘ್ನೇಶ್ವರ ಭಟ್ ಸಂಘಟನಾ ಭಾಷಣ ಮಾಡಿದರು. ಕಾರ್ಯದರ್ಶಿ ಅರವಿಂದ ಕುಮಾರ್ ಸ್ವಾಗತಿಸಿ ವಾರ್ಷಿಕ ವರದಿ, ಕೋಶಾಧಿಕಾರಿ ಕೇಶವ ಪ್ರಸಾದ ಕುಳಮರ್ವ ಲೆಕ್ಕಪತ್ರ ಮಂಡಿಸಿದರು. ನಿವೃತ್ತ ಅಧ್ಯಾಪಕ ಸೂರ್ಯನಾರಾಯಣ ಎಂ. ಅಗಲ್ಪಾಡಿ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಪದ್ಮನಯನ ಎನ್.ಕೆ. ನಿರೂಪಿಸಿದರು.