ನವದೆಹಲಿ: ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಳ ದಾನ ಮತ್ತು ಕಸಿ ಸಂಬಂಧ ಎಲ್ಲ ರಾಜ್ಯಗಳಲ್ಲಿ ಏಕರೂಪ ನಿಯಮ ಜಾರಿಗೆ ತರುವ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠವು, 'ಗಿಫ್ಟ್ ಆಫ್ ಲೈಫ್ ಅಡ್ವೆಂಚರ್ ಫೌಂಡೇಷನ್' ಸಂಸ್ಥೆಯು ಅಂಗಾಂಗ ದಾನ, ಕಸಿಯಲ್ಲಿ ಏಕರೂಪ ನಿಯಮಾವಳಿ ಇಲ್ಲದೆ ಇರುವ ಬಗ್ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಆಲಿಸುವಾಗ ಈ ಸೂಚನೆ ನೀಡಿದೆ.
ಈ ಪಿಐಎಲ್ ವಿಚಾರಣೆಗೆ ಪೀಠವು ನಿರಾಕರಿಸಿದಾಗ್ಯೂ, ಅಂಗಾಂಗ ಕಸಿ ಸಂಬಂಧ ಏಕರೂಪ ನಿಯಮಗಳ ಅಗತ್ಯತೆ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸೂಚಿಸಲು ಒಪ್ಪಿಕೊಂಡಿತು.
'ನಾವು ನಿಮ್ಮ ಅರ್ಜಿಯನ್ನು ವಜಾಗೊಳಿಸುತ್ತಿಲ್ಲ. ಅರ್ಜಿದಾರರ ಕುಂದು-ಕೊರತೆಯೆಂದರೆ, ಅಂಗಾಂಗ ಕಸಿಗೆ ನೋಂದಾಯಿಸಲು ನಿವಾಸ ಪ್ರಮಾಣಪತ್ರ ಸಲ್ಲಿಸಲು ರಾಜ್ಯಗಳು ಬೇಕಾಬಿಟ್ಟಿ ಷರತ್ತುಗಳನ್ನು ವಿಧಿಸಿವೆ ಎನ್ನುವುದಾಗಿದೆ. ಇದನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪರಿಶೀಲಿಸಲಿದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಲಾಗುವುದು' ಎಂದು ಪೀಠವು, ಅರ್ಜಿವಿಲೇವಾರಿ ಮಾಡುವಾಗ ಹೇಳಿತು.
ಕೆಲವು ರಾಜ್ಯಗಳಲ್ಲಿ ಅಂಗಾಂಗ ದಾನ ಪಡೆಯುವ ವ್ಯಕ್ತಿಯು ಹೆಸರು ನೋಂದಾಯಿಸಲು ರಾಜ್ಯದಲ್ಲಿ ಕನಿಷ್ಠ 10ರಿಂದ 15 ವರ್ಷಗಳು ವಾಸಿಸಿದ ನಿವಾಸ ಪ್ರಮಾಣಪತ್ರ ಸಲ್ಲಿಸಬೇಕಾದ ಷರತ್ತು ನಿಗದಿಪಡಿಸಲಾಗಿದೆ. ಇದು ಏಕಪಕ್ಷೀಯ ನಿರ್ಧಾರ. ನಿಯಮಾವಳಿಗಳಲ್ಲಿ ಏಕರೂಪತೆಯ ಕೊರತೆ ಇದೆ. ಮಾನವ ಅಂಗಾಂಗಳು ಮತ್ತು ಅಂಗಾಂಶಗಳ ಕಸಿ ಕಾಯ್ದೆ 1994ರ ಅಡಿಯಲ್ಲಿ ಏಕರೂಪ ನಿಯಮಾವಳಿಗೆ ಮಾರ್ಗಸೂಚಿಗಳನ್ನು ರೂಪಿಸಲು ರಾಜ್ಯಗಳಿಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದರು.