ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್(Covid) ಪ್ರಕರಣಗಳು ಉಲ್ಬಣಗೊಂಡಿರುವ ನಡುವೆಯೇ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ(Mansukh Mandavia) ಅವರು,ಕಟ್ಟೆಚ್ಚರ ವಹಿಸುವಂತೆ ಮತ್ತು ವಿಶೇಷವಾಗಿ ಮುಂಬರುವ ಹಬ್ಬಗಳು ಮತ್ತು ಹೊಸ ವರ್ಷಾಚರಣೆಗಳ ಹಿನ್ನೆಲೆಯಲ್ಲಿ ಮಾಸ್ಕ್(Mask)ಗಳನ್ನು ಧರಿಸುವ ಮತ್ತು ಹ್ಯಾಂಡ್ ಸ್ಯಾನಿಟೈಸರ್(Hand sanitizer)ಗಳನ್ನು ಬಳಸುವ ಕುರಿತು ಜನರಲ್ಲಿ ಜಾಗ್ರತಿಯನ್ನು ಮೂಡಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದಾರೆ.
ಗುರುವಾರ ಲೋಕಸಭೆ(Lok Sabha)ಯಲ್ಲಿ ಹೇಳಿಕೆಯನ್ನು ನೀಡಿದ ಮಾಂಡವಿಯಾ,ನಿರಂತರವಾಗಿ ವಿಕಸನಗೊಳ್ಳುವ ವೈರಸ್‌ನ ಸ್ವಭಾವವು ಜಾಗತಿಕ ಆರೋಗ್ಯಕ್ಕೆ ಬೆದರಿಕೆಯನ್ನೊಡ್ಡಿದೆ,ವಾಸ್ತವದಲ್ಲಿ ಅದು ಪ್ರತಿಯೊಂದೂ ದೇಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ವಿಶ್ವಾದ್ಯಂತ ಪ್ರತಿ ದಿನ 5.87 ಲ.ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದರೆ ಭಾರತದಲ್ಲಿ ಸರಾಸರಿ 153 ಹೊಸ ಪ್ರಕರಣಗಳು ದಾಖಲಾಗುತ್ತಿವೆ ಎಂದು ಹೇಳಿದ ಅವರು,ಮುಂಬರುವ ಹಬ್ಬಗಳು ಮತ್ತು ಹೊಸ ವರ್ಷಾಚರಣೆ ಸಂಭ್ರಮಗಳ ಹಿನ್ನೆಲೆಯಲ್ಲಿ ರಾಜ್ಯಗಳೂ ಕೋವಿಡ್ ಸೂಕ್ತ ನಡವಳಿಕೆಗಳನ್ನು ಅನುಸರಿಸುವಂತೆ ಪರಿಣಾಮಕಾರಿ ಅರಿವನ್ನು ಮೂಡಿಸುವುದು ಅಗತ್ಯವಾಗಿದೆ. ಮಾಸ್ಕ್‌ಗಳ ಬಳಕೆ,ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು,ಸುರಕ್ಷಿಯ ಅಂತರವನ್ನು ಕಾಯ್ದುಕೊಳ್ಳುವುದು ಇತ್ಯಾದಿಗಳು ಇವುಗಳಲ್ಲಿ ಸೇರಿವೆ ಎಂದರು.
ಸಮದಾಯದೊಳಗೆ ಹೆಚ್ಚಿನ ಕಣ್ಗಾವಲಿನ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಹಾಗೂ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಲುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ. ಹೊಸ ಪ್ರಭೇದಗಳೇನಾದರೂ ಇದ್ದರೆ ಅವುಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಲು ಎಲ್ಲ ಪಾಸಿಟಿವ್ ಪ್ರಕರಣಗಳ ಸಮಗ್ರ ಜಿನೋಮ್ ಸೀಕ್ವೆನ್ಸಿಂಗ್‌ನ್ನು ಹೆಚ್ಚಿಸುವಂತೆಯೂ ಅವುಗಳಿಗೆ ಸೂಚಿಸಲಾಗಿದೆ ಎಂದರು.
ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗಳ ನೀಡಿಕೆಯನ್ನು ಮತ್ತು ಅವುಗಳ ಕುರಿತು ಜಾಗ್ರತಿಯನ್ನು ಹೆಚ್ಚಿಸುವುದನ್ನು ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ದೇಶದೊಳಗೆ ಯಾವುದೇ ನೂತನ ಪ್ರಭೇದದ ಪ್ರವೇಶದ ಅಪಾಯವನ್ನು ಕನಿಷ್ಠಗೊಳಿಸಲು ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಯಾದ್ರಚ್ಛಿಕವಾಗಿ ಶೇ.2ರಷ್ಟು ಅಂತರರಾಷ್ಟ್ರೀಯ ಪ್ರಯಾಣಿಕರ ಸ್ಯಾಂಪಲ್‌ಗಳನ್ನು ಪಡೆಯುವುದನ್ನು ಗುರುವಾರದಿಂದಲೇ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು. ಒಮೈಕ್ರಾನ್ ಪ್ರಭೇದದ ನೂತನ ಮತ್ತು ಹೆಚ್ಚು ಸಾಂಕ್ರಾಮಿಕ ಬಿಎಫ್.7 ತಳಿಯು ಚೀನಾದಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳಲು ಕಾರಣವಾಗಿದೆ ಮತ್ತು ಭಾರತದಲ್ಲಿ ಈವರೆಗೆ ಇಂತಹ ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಂಡವಿಯಾ ಹೇಳಿಕೆಯಲ್ಲಿ ತಿಳಿಸಿದರು.
ಮಾಂಡವಿಯಾ ಕೋವಿಡ್-19 ಪ್ರಕರಣಗಳು ಮತ್ತೆ ಹರಡುವುದನ್ನು ತಡೆಯಲು ಕಾರ್ಯತಂತ್ರಗಳನ್ನು ರೂಪಿಸಲು ಬುಧವಾರ ಹಿರಿಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದರು.