ನವದೆಹಲಿ: 'ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ತಮ್ಮದೇ ಆದ ಪಾವಿತ್ರ್ಯವನ್ನು ಹೊಂದಿವೆ ಮತ್ತು ಅದರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಉತ್ತರಪ್ರದೇಶದ ರಾಮ್‌ಪುರ ಸದರ್ ವಿಧಾನಸಭಾ ಉಪ ಚುನಾವಣೆಯಲ್ಲಿ ಮತದಾರರನ್ನು ಪೊಲೀಸರು ಥಳಿಸಿದ್ದು, ಅವರಿಗೆ ಮತ ಹಾಕಲು ಬಿಡದೇ ಮನೆಯಲ್ಲಿರುವಂತೆ ಮಾಡಲಾಗಿದೆ ಎಂದು ವಕೀಲರೊಬ್ಬರು ಖುದ್ದಾಗಿ ಹಾಜರಾಗಿ ಆರೋಪಿಸಿದ್ದರು.
ವಕೀಲರ ಮಾತನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು, ಮತ ಎಣಿಕೆ ಯಾವತ್ತು ನಡೆಯಲಿದೆ ಎಂದು ಪ್ರಶ್ನಿಸಿದಾಗ, ವಕೀಲರು ಗುರುವಾರ ನಡೆಯಲಿದೆ ಎಂದು ಮಾಹಿತಿ ನೀಡಿದರು.
'ಮತದಾರರ ಚರ್ಮ ನೀಲಿಗಟ್ಟುವಂತೆ ಪೊಲೀಸರು ಥಳಿಸಿದ್ದಾರೆ. ಅಷ್ಟೇ ಅಲ್ಲ ಅವರನ್ನು ಮನೆಗಳಲ್ಲೇ ಬಂಧಿಯಾಗಿರುವಂತೆ ಒತ್ತಾಯ ಮಾಡಲಾಯಿತು. ಈ ಗಲಾಟೆಯಲ್ಲಿ ನಾನು ಕೂಡಾ ಗಾಯಗೊಂಡಿದ್ದೇನೆ' ಎಂದು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.
'ಗುರುವಾರವೇ ಮತಎಣಿಕೆ ಇರುವುದರಿಂದ ಈಗ ಏನೂ ಮಾಡಲಾಗದು, ಕ್ಷಮಿಸಿ' ಎಂದ ನ್ಯಾಯಪೀಠವು, ಗುರುವಾರ ಬೆಳಿಗ್ಗೆ ಈ ಬಗ್ಗೆ ಅರ್ಜಿ ಸಲ್ಲಿಸುವಂತೆ ವಕೀಲರಿಗೆ ಸೂಚನೆ ನೀಡಿತು.