ನವದೆಹಲಿ :ತಾವು ಉದ್ಯೋಗ ಹಗರಣದ ಬಲಿಪಶುಗಳು ಎಂಬ ಸಂಗತಿ ಅರಿಯದ ತಮಿಳುನಾಡು ಮೂಲದ ಕನಿಷ್ಠ 28 ಮಂದಿ ಕಳೆದ ಒಂದು ತಿಂಗಳಿನಿಂದ ದಿಲ್ಲಿಯ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ (New Delhi Railway Station) ಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ರೈಲುಗಳ ಆಗಮನ, ನಿರ್ಗಮನವನ್ನು ಎಣಿಸುತ್ತಾ ಕೂತಿರುವ ವಂಚನೆ ಪ್ರಕರಣವೊಂದನ್ನು ವರದಿಯಾಗಿದೆ.
ತಮಿಳುನಾಡು ಮೂಲದ ಉದ್ಯೋಗಾಕಾಂಕ್ಷಿಗಳಾಗಿದ್ದ 28 ಮಂದಿಗೆ ಪ್ರಯಾಣ ಚೀಟಿ ತಪಾಸಣಾ ಹುದ್ದೆ, ಸಂಚಾರ ಸಹಾಯಕ ಹುದ್ದೆ ಹಾಗೂ ಗುಮಾಸ್ತ ಹುದ್ದೆಗಳ ತರಬೇತಿಯ ಭಾಗವಾಗಿ ರೈಲುಗಳ ಆಗಮನ, ನಿರ್ಗಮನವನ್ನು ಎಣಿಸುತ್ತಾ ಕೂರಬೇಕು ಎಂದು ಸೂಚಿಸಲಾಗಿದೆ. ಈ ಹುದ್ದೆಗಳಿಗೆ ಪ್ರತಿ ಉದ್ಯೋಗಾಕಾಂಕ್ಷಿಯಿಂದ ರೂ. 2 ಲಕ್ಷದಿಂದ ರೂ. 24 ಲಕ್ಷದವರೆಗೆ ಲಂಚ ವಸೂಲಿ ಮಾಡಲಾಗಿದೆ ಎಂದು ದೆಹಲಿ ಆರ್ಥಿಕ ಅಪರಾಧಗಳ ಪೊಲೀಸ್ ದಳಕ್ಕೆ ದೂರು ಸಲ್ಲಿಕೆಯಾಗಿದೆ.
ಈ ಕುರಿತು 78 ವರ್ಷದ ಎಂ. ಸುಬ್ಬುಸಾಮಿ ಎಂಬುವವರು ದೂರು ದಾಖಲಿಸಿದ್ದು, ಈ ತರಬೇತಿಯು ಜೂನ್-ಜುಲೈ ತಿಂಗಳಲ್ಲಿ ನಡೆದಿದ್ದು, ವಂಚಕರ ಗುಂಪೊಂದು ಉದ್ಯೋಗಾಕಾಂಕ್ಷಿಗಳಿಗೆ ರೂ. 2.67 ಕೋಟಿ ವಂಚಿಸಿದೆ ಎಂದು ಆರೋಪಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳನ್ನು ವಂಚಕರ ಗುಂಪಿಗೆ ಮಾಜಿ ಸೈನಿಕರಾದ ಸುಬ್ಬುಸಾಮಿಯೇ ಪರಿಚಯಿಸಿದ್ದರು. ಆದರೆ, ಇಡೀ ಉದ್ಯೋಗ ನೇಮಕಾತಿಯೇ ಒಂದು ಹಗರಣವೆಂಬ ಸಂಗತಿ ಅರಿಯದೆ ನಾನೂ ಕೂಡಾ ಅವರ ವಂಚನೆಯ ಜಾಲಕ್ಕೆ ಬಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ಪ್ರತಿ ಉದ್ಯೋಗಾಕಾಂಕ್ಷಿಯೂ ರೂ. 2 ಲಕ್ಷದಿಂದ ರೂ. 24 ಲಕ್ಷದವರೆಗಿನ ಮೊತ್ತವನ್ನು ಸುಬ್ಬುಸಾಮಿಗೆ ಪಾವತಿಸಿದ್ದರು. ನಂತರ ಸುಬ್ಬುಸಾಮಿ ವಿಕಾಸ್ ರಾಣಾ ಎಂಬ ವ್ಯಕ್ತಿಗೆ ಆ ಮೊತ್ತವನ್ನು ಹಸ್ತಾಂತರಿಸಿದ್ದರು. "ರಾಣಾ ತನ್ನನ್ನು ತಾನು ಉತ್ತರ ರೈಲ್ವೆ ವಲಯ ಕಚೇರಿಯ ಉಪ ನಿರ್ದೇಶಕ ಎಂದು ಪರಿಚಯಿಸಿಕೊಂಡಿದ್ದರು" ಎಂದು ಉದ್ಯೋಗ ಹಗರಣದ ಬಲಿಪಶುಗಳ ಪೈಕಿ ಒಬ್ಬರಾಗಿರುವ ಸೆಂಥಿಲ್ ಕುಮಾರ್ ತಿಳಿಸಿದ್ದಾರೆ. ಹಗರಣದ ಬಲಿಪಶುಗಳ ಪೈಕಿ ಬಹುತೇಕರು ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಪದವಿ ಹಿನ್ನೆಲೆ ಹೊಂದಿರುವವರಾಗಿದ್ದಾರೆ.
"ಪ್ರಯಾಣ ಚೀಟಿ ತಪಾಸಣೆ, ಸಂಚಾರ ಸಹಾಯಕ ಮತ್ತು ಗುಮಾಸ್ತ ಹುದ್ದೆಗಳ ತರಬೇತಿಗೆ ಪ್ರತಿ ವ್ಯಕ್ತಿಯಿಂದಲೂ ಪ್ರತ್ಯೇಕ ಮೊತ್ತ ವಸೂಲಿ ಮಾಡಲಾಗಿದ್ದರೂ, ಎಲ್ಲರನ್ನೂ ನಿಲ್ದಾಣದಲ್ಲಿ ರೈಲುಗಳನ್ನು ಎಣಿಸುವ ಕೆಲಸಕ್ಕೆ ನಿಯೋಜಿಸಲಾಗಿತ್ತು" ಎಂದು ಅವರು ತಿಳಿಸಿದ್ದಾರೆ.
"ನಾನು ಸೇವೆಯಿಂದ ನಿವೃತ್ತನಾದಾಗಿನಿಂದ ಯಾವುದೇ ಆರ್ಥಿಕ ಹಿತಾಸಕ್ತಿ ಇಲ್ಲದೆ ನನ್ನ ಸುತ್ತಮುತ್ತಲಿನ ನಿರುದ್ಯೋಗಿ ಯುವಕರಿಗೆ ಸೂಕ್ತ ಉದ್ಯೋಗ ದೊರಕಿಸಿಕೊಡಲು ನೆರವು ನೀಡುತ್ತಾ ಬಂದಿದ್ದೇನೆ" ಎಂದು ತಮಿಳುನಾಡಿನ ವಿರುಧನಗರ ಜಿಲ್ಲೆಯ ನಿವಾಸಿಯಾದ ಸುಬ್ಬುಸಾಮಿ ಪಿಟಿಐ ಸುದ್ದಿ ಸಂಸ್ಥೆಗೆ ದೂರವಾಣಿ ಕರೆ ಮೂಲಕ ಉತ್ತರಿಸಿದ್ದಾರೆ. ಪ್ರಾಥಮಿಕ ಮಾಹಿತಿ ವರದಿಯಲ್ಲಿ ದೆಹಲಿಯ ಸಂಸದರ ಭವನದಲ್ಲಿ ಕೊಯಂಬತ್ತೂರು ಮೂಲದ ಶಿವರಾಮನ್ ಎಂಬ ವ್ಯಕ್ತಿಯನ್ನು ಸುಬ್ಬುಸಾಮಿ ಭೇಟಿಯಾಗಿದ್ದರು ಎಂದು ಆರೋಪಿಸಲಾಗಿದೆ. ಸಿವರಾಮನ್ ತನ್ನನ್ನು ತಾನು ಸಂಸದರು, ಸಚಿವರಿಗೆ ಆಪ್ತ ವ್ಯಕ್ತಿ ಎಂದು ಪರಿಚಯಿಸಿಕೊಂಡಿದ್ದು, ಆರ್ಥಿಕ ಲಾಭದ ಆಧಾರದಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿಕೊಂಡಿದ್ದ ಎನ್ನಲಾಗಿದೆ.
ಮುಂದುವರಿದು, ಉದ್ಯೋಗಾಕಾಂಕ್ಷಿಗಳನ್ನು ದೆಹಲಿಗೆ ಕರೆ ತರುವಂತೆ ಶಿವರಾಮನ್ ತನಗೆ ಸೂಚಿಸಿದ್ದ ಎಂದು ಸುಬ್ಬುಸಾಮಿ ಆರೋಪಿಸಿದ್ದಾರೆ. "ಮೊದಲಿಗೆ ನಾನು ಮೂವರು ಉದ್ಯೋಗಾಕಾಂಕ್ಷಿಗಳನ್ನು ದೆಹಲಿಗೆ ಕರೆ ತಂದಿದ್ದೆ. ಈ ಸುದ್ದಿ ಸ್ವಗ್ರಾಮ ಹಾಗೂ ಮದುರೈ ಅಕ್ಕಪಕ್ಕದ ಗ್ರಾಮಗಳಿಗೂ ಹಬ್ಬಿ, ಮತ್ತೆ 25 ಮಂದಿ ಉದ್ಯೋಗಾಕಾಂಕ್ಷಿಗಳು ನಮ್ಮನ್ನು ಸೇರಿಕೊಂಡರು" ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ವರದಿ ಪ್ರಕಾರ, ಉದ್ಯೋಗ ದೊರಕಿಸಿಕೊಡುವ ಶುಲ್ಕವಾಗಿ ಹಣ ನೀಡಿದ ನಂತರ, ಈ ಉದ್ಯೋಗಾಕಾಂಕ್ಷಿಗಳನ್ನು ಕನ್ಹಾಟ್ ಪ್ಲೇಸ್‌ನ ರೈಲ್ವೆ ಕೇಂದ್ರೀಯ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗಾಗಿ ಕರೆಸಿಕೊಳ್ಳಲಾಯಿತು. ನಂತರ ವಿವಿಧ ದಿನಾಂಕಗಳಂದು ಹೊಸದಿಲ್ಲಿಯ ಶಂಕರ್ ಮಾರುಕಟ್ಟೆಯಲ್ಲಿರುವ ಉತ್ತರ ರೈಲ್ವೆ ವಲಯದ ಕಿರಿಯ ಎಂಜಿನಿಯರ್ ಕಚೇರಿಯಲ್ಲಿ ಶೈಕ್ಷಣಿಕ ದಾಖಲೆಗಳ ಪರಿಶೀಲನೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ.
"ರಾಣಾ ಯಾವಾಗಲೂ ಕಚೇರಿಯ ಹೊರಗೆ ನಮ್ಮಿಂದ ಹಣ ಪಡೆಯುತ್ತಿದ್ದ ಮತ್ತು ಆತ ಎಂದೂ ನಮ್ಮನ್ನು ರೈಲ್ವೆ ಕಟ್ಟಡದೊಳಗೆ ಕರೆದುಕೊಂಡು ಹೋಗಲಿಲ್ಲ. ತರಬೇತಿ ಆದೇಶ ಪತ್ರ, ಗುರುತಿನ ಚೀಟಿ, ತರಬೇತಿ ಮುಕ್ತಾಯ ಪ್ರಮಾಣ ಪತ್ರ ಹಾಗೂ ನೇಮಕಾತಿ ಪತ್ರ ಸೇರಿದಂತೆ ಎಲ್ಲವನ್ನೂ ಪೋರ್ಜರಿ ಮಾಡಿ ನೀಡಲಾಗಿತ್ತು ಎಂಬ ಸಂಗತಿ ರೈಲ್ವೆ ಪ್ರಾಧಿಕಾರವನ್ನು ಸಂಪರ್ಕಿಸಿದ ನಂತರವೇ ತಿಳಿಯಿತು" ಎಂದು ಬಲಿಪಶುಗಳು ಅಲವತ್ತುಕೊಂಡಿದ್ದಾರೆ.
ದೆಹಲಿ ಆರ್ಥಿಕ ಅಪರಾಧಗಳ ಪೊಲೀಸ್ ದಳ ತನ್ನ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಉದ್ಯೋಗ ಹಗರಣ ಎಂಬ ಸಂಗತಿಯನ್ನು ಪತ್ತೆ ಹಚ್ಚಿದ್ದು, ತನಿಖೆ ಪ್ರಗತಿಯಲ್ಲಿದೆ.
ಉದ್ಯೋಗ ಹಗರಣ ಬಯಲಾಗುತ್ತಿದ್ದಂತೆ ಈ ಕುರಿತು ಮುನ್ನೆಚ್ಚರಿಕೆ ನೀಡಿರುವ ರೈಲ್ವೆ ಸಚಿವಾಲಯದ ಮಾಧ್ಯಮ ಮತ್ತು ಸಂಪರ್ಕ ವಿಭಾಗದ ಮಹಾ ನಿರ್ದೇಶಕ ಯೋಗೇಶ್ ಬವೇಜಾ, ರೈಲ್ವೆ ಇಲಾಖೆ ಪ್ರತಿ ಬಾರಿಯೂ ಸಾಮಾನ್ಯ ಜನರಿಗೆ ವಂಚಕ ಜಾಲದ ಬಗ್ಗೆ ಮಾರ್ಗದರ್ಶನ ಹಾಗೂ ಮುನ್ನೆಚ್ಚರಿಕೆಯನ್ನು ನೀಡುತ್ತಲೇ ಬರುತ್ತಿದೆ. ಯುವಕರು ಇಂಥ ವಂಚಕರ ಜಾಲದ ಬಗ್ಗೆ ಯಾವಾಗಲೂ ಎಚ್ಚರಿಕೆಯಿಂದ ಇರಬೇಕು ಹಾಗೂ ಇಂತಹ ಪರಿಸ್ಥಿತಿಗೆ ಸಿಲುಕಿದಾಗ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಅದರಿಂದ ಸತ್ಯದ ಆಳವನ್ನು ಬಹುಬೇಗ ತಿಳಿದುಕೊಳ್ಳಬಹುದು ಮತ್ತು ಕಠಿಣ ದುಡಿಮೆಯಿಂದ ಗಳಿಸಿರುವ ಹಣವನ್ನು ರಕ್ಷಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.