ನವದೆಹಲಿ: ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾದ ಮನುಷ್ಯರ ಜೀವಕೋಶ ಹಾಗೂ ಅಂಗಾಂಶಗಳ ಮೇಲೆಯೂ ಔಷಧಗಳ ಪ್ರಾಯೋಗಿಕ ಪರೀಕ್ಷೆ (ಕ್ಲಿನಿಕಲ್ ಟ್ರಯಲ್) ಮಾಡುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯಪ್ರವೃತ್ತವಾಗಿದೆ.
ಈ ಸಂಬಂಧ, ನೂತನ ಔಷಧ ಮತ್ತು ಔಷಧಗಳ ಪ್ರಾಯೋಗಿಕ ಬಳಕೆ ನಿಯಮ, 2019ಕ್ಕೆ ತಿದ್ದುಪಡಿ ತರಲು ಇಲಾಖೆ ಚಿಂತನೆ ನಡೆಸಿದೆ.
ಈ ಕುರಿತು ಕರಡು ಅಧಿಸೂಚನೆ ಸಿದ್ಧಪಡಿಸಲಾಗಿದೆ. ಈ ತಿದ್ದುಪಡಿಗೆ ಒಪ್ಪಿಗೆ ದೊರೆತರೆ ಭಾರತವು ಮಾನವನ ಜೀವಕೋಶ ಹಾಗೂ ಅಂಗಾಂಶಗಳ ಮೇಲೆ ಔಷಧ ಪ್ರಯೋಗ ಮಾಡುವ ವಿಶ್ವದ ಎರಡನೇ ದೇಶವಾಗಲಿದೆ. ಈಗ ಅಮೆರಿಕದಲ್ಲಿ ಮಾತ್ರ ಈ ರೀತಿಯ ಪರೀಕ್ಷೆ ನಡೆಸಲಾಗುತ್ತಿದೆ.
ಯೋಜಿತ ಶಸ್ತ್ರಕ್ರಿಯೆಗಳ ಸಂದರ್ಭದಲ್ಲಿ ಸಂಗ್ರಹಿಸಲಾಗುವ ರಕ್ತ, ಜೀವಕೋಶ ಮತ್ತು ಮೂತ್ರದಂತಹ ಮಾದರಿಗಳನ್ನು ಸೂಕ್ತ ಸಮ್ಮತಿ ಪ್ರಕ್ರಿಯೆಗಳ ಮೂಲಕ ಪಡೆದುಕೊಳ್ಳಲಾಗುವುದು. ಇವುಗಳನ್ನು ಬಳಸಿ ಕೃತಕ ಜೀವಕೋಶಗಳನ್ನು ನಿರ್ಮಿಸಲಾಗುವುದು. ಇಂತಹ ಜೀವಕೋಶಗಳನ್ನು ಔಷಧಗಳ ಪ್ರಾಯೋಗಿಕ ಪರೀಕ್ಷೆಗೆ ಬಳಸಿಕೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ವಿವರಿಸಿವೆ.
'ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ಪ್ರಾಣಿಗಳ ಮೇಲೆ ನಡೆಸುವ ಪ್ರಯೋಗದ ಸಮಯಕ್ಕಿಂತ ಕಡಿಮೆ ಸಮಯ ಹಿಡಿಯಲಿದೆ. ಪ್ರಯೋಗದ ವೆಚ್ಚ ತಗ್ಗಲಿದೆ. ಈ ತಂತ್ರಜ್ಞಾನವು ಯಶಸ್ಸಿನ ಪ್ರಮಾಣವನ್ನು ಶೇ 70ರಿಂದ ಶೇ 80ರಷ್ಟು ಹೆಚ್ಚಿಸಲಿದೆ. ಪ್ರಾಣಿಗಳ ಮೇಲಿನ ಪ್ರಯೋಗದಲ್ಲಿ ವೈಫಲ್ಯ ಪ್ರಮಾಣವು ಶೇ 80ರಿಂದ ಶೇ 90ರಷ್ಟಿದೆ' ಎಂದು ಮೂಲಗಳು ತಿಳಿಸಿವೆ.