ಕುಂಬಳೆ: ಅಭಿವೃದ್ಧಿಕಾರ್ಯ ನಡೆಯುತ್ತಿರುವ ಕುಂಬಳೆ-ಮುಳ್ಳೇರಿಯ ನಡುವಿನ ಕೆಎಸ್‍ಟಿಪಿ ರಸ್ತೆಯ ವಿವಿಧೆಡೆ ಕಡಿದಾದ ಪ್ರದೇಶದಲ್ಲಿ ಮಣ್ಣು ಸವೆತ ತಡೆಗೆ ಪರಿಸರಸ್ನೇಹಿ ತೆಂಗಿನ ನಾರಿನ ಹೊದಿಕೆ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ.
ಕುಂಬಳೆಯಿಂದ ಸೀತಾಂಗೋಳಿ, ಬದಿಯಡ್ಕ, ನಾರಂಪಾಡಿ ಮೂಲಕ ಕುಂಬಳೆಗೆ 29ಕಿ.ಮೀ ದೂರವಿದ್ದು, ಪ್ರಸಕ್ತ ಕೆಎಸ್‍ಟಿಪಿ ರಸ್ತೆಯನ್ನು 158ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕಡಿದಾದ ಹಾಗೂ ಇಳಿಜಾರು ಪ್ರದೇಶಗಳಲ್ಲಿ ರಸ್ತೆ ಎರಡೂ ಬದಿ ಬೃಹತ್ ಕಾಂಕ್ರೀಟ್ ಸ್ಲ್ಯಾಬ್‍ಗಳನ್ನೂ ಅಳವಡಿಸಲಾಗುತ್ತಿದೆ. ಈ ಸ್ಲ್ಯಾಬ್‍ಗಳ ಮೇಲ್ಭಾಗದಲ್ಲಿನ ಗುಡ್ಡವನ್ನು ಇಳಿಜಾರು ರೂಪದಲ್ಲಿ ಕತ್ತರಿಸಿ, ಮಣ್ಣು ಕುಸಿಯದಂತೆ ತಡೆಗಟ್ಟುವ ನಿಟ್ಟಿನಲ್ಲಿ ತೆಂಗಿನನಾರಿನ ಪದರನ್ನು ಹೊದಿಸಲಾಗುತ್ತಿದೆ. ಎರಡು ಮೀ. ಅಗಲ ಹಾಗೂ 20ಮೀ. ಉದ್ದಕ್ಕೆ ತೆಳ್ಳಗಿನ ಪ್ಲಾಸ್ಟಿಕ್ ಬಲೆಯಲ್ಲಿ ತೆಂಗಿನ ನಾರನ್ನು ಹರಡಿ, ಇದರ ಮೇಲ್ಭಾಗಕ್ಕೂ ಪ್ಲಾಸ್ಟಿಕ್ ಬಲೆಯನ್ನು ಅಳವಡಿಸಿ ಈ ಪ್ರಕೃತಿಸ್ನೇಹಿ ಭೂಕವಚವನ್ನು ತಯಾರಿಸಲಾಗುತ್ತಿದೆ. ರಸ್ತೆಯ ಅಂಚಿಗೆ ಮೂರರಿಂದ ಐದು ಮೀ. ಎತ್ತರಕ್ಕೆ ನಿರ್ಮಿಸಿರುವ ಕಾಂಕ್ರೀಟ್ ಸ್ಲ್ಯಾಬ್‍ನ ಮೇಲ್ಭಾಗಕ್ಕಿರುವ ಗುಡ್ಡದ ಮಣ್ಣು ಕುಸಿದು ಬೀಳದಂತೆ ಈ ಭೂಕವಚವನ್ನು ಅಚ್ಚುಕಟ್ಟಾಗಿ ಅಳವಡಿಸಲಾಗುತ್ತದೆ. ತೆಂಗಿನ ನಾರಿನ ರೋಲ್‍ಗಳನ್ನು ಗುಡ್ಡದ ಎತ್ತರಕ್ಕನುಸರಿಸಿ ಕತ್ತರಿಸಿ ಅಳವಡಿಸಲಾಗುತ್ತದೆ.
ಬದಿಯಡ್ಕ ಸನಿಹದ ಪೆರಡಾಲಸೇತುವೆ, ಗೋಳಿಯಡಿ, ಕಾಂತಿಲ ಪ್ರದೇಶದಲ್ಲಿ 660ಮೀ. ವರೆಗೆ ಈ ರೀತಿಯ ತೆಂಗಿನ ನಾರಿನ ಕವಚ ಅಳವಡಿಸಲಾಗುತ್ತಿದ್ದು, ಶೇ. 90ರಷ್ಟು ಕಾಮಗಾರಿ ಪೂರ್ತಿಗೊಂಡಿದೆ. ಬದಿಯಡ್ಕದಿಂದ ಮುಳ್ಳೇರಿಯ ತೆರಳುವ ಮವ್ವಾರು, ಬೆಳ್ಳಿಗೆ ಪ್ರದೇಶದಲ್ಲಿ ಈ ಹೊದಿಕೆ ಅಳವಡಿಸುವ ಕಾರ್ಯ ನಡೆಯಬೇಕಾಗಿದೆ.
ಕೇರಳದ ನಾನಾ ಕಡೆ ಮಣ್ಣು ಸವೆತ ತಡೆಗಟ್ಟಲು ಈ ರೀತಿಯ ತೆಂಗಿನ ನಾರಿನ ಕವಚ ಅಳವಡಿಸುವ ಕಾರ್ಯ ನಡೆದುಬರುತ್ತಿದೆ. ಪರಿಸರಕ್ಕೆ ಯಾವುದೇ ಹಾನಿಯಿಲ್ಲದೆ ಮಣ್ಣುಸವೆತ ತಡೆಗಟ್ಟುವಲ್ಲಿ ಯೋಜನೆ ಯಶಸ್ವಿಯಾಗಿ ಸಾಗುತ್ತಿದೆ.