ತಿರುವನಂತಪುರಂ: ಪರೀಕ್ಷೆಯಲ್ಲಿ ಉತ್ತೀರ್ಣರಾಗದವರಿಗೆ ವೈದ್ಯ ಪದವಿ ನೀಡಲು ಆಯುರ್ವೇದ ಕಾಲೇಜಿನಲ್ಲಿ ಕ್ರಮ ಕೈಗೊಂಡ ಆರೋಗ್ಯ ವಿಶ್ವವಿದ್ಯಾಲಯದ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಿಎಎಂಎಸ್ ಪದವಿ ಪ್ರದಾನ ಸಮಾರಂಭದಲ್ಲಿ ನೀಡಿದ ಎಲ್ಲ ಪ್ರಮಾಣ ಪತ್ರಗಳನ್ನು ವಾಪಸ್ ಪಡೆಯಲು ವಿಶ್ವವಿದ್ಯಾಲಯ ಮುಂದಾಗಿದೆ. ಪದವಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾಲಯ ನೀಡಿದ ಪ್ರಮಾಣ ಪತ್ರ ವಿತರಿಸಿಲ್ಲ. ಬದಲಾಗಿ ಕಾಲೇಜು ಪ್ರಾಂಶುಪಾಲರು ಸಿದ್ಧಪಡಿಸಿದ ಪ್ರಮಾಣ ಪತ್ರ ನೀಡಲಾಗಿದೆ.
ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಕಾಲೇಜು ಮತ್ತು ಪ್ರಾಂಶುಪಾಲರ ಜವಾಬ್ದಾರಿಯಾಗಿದೆ ಎಂಬುದು ವಿಶ್ವವಿದ್ಯಾಲಯದ ವಾದವಾಗಿದೆ. ಈ ಬಗ್ಗೆ ತುರ್ತು ವರದಿ ನೀಡುವಂತೆ ಉಪಕುಲಪತಿ ಡಾ. ಮೋಹನನ್ ಕುನುಮ್ಮಲ್ ಹೇಳಿದರು. ಪದವೀಧರರಲ್ಲಿ ಏಳು ಮಂದಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ. ಒಟ್ಟು 64 ಮಂದಿ ಪಟ್ಟಿಯಲ್ಲಿದ್ದರು. ಇದೇ ತಿಂಗಳ 15ರಂದು ಸಮಾರಂಭವಿತ್ತು. ಉತ್ತೀರ್ಣರಾಗದೆ ಪದವಿ ಪಡೆದವರಲ್ಲಿ ಪಿಟಿಎ ಪದಾಧಿಕಾರಿಯ ಪುತ್ರನೂ ಸೇರಿದ್ದಾನೆ.
ಎಸ್‍ಎಫ್‍ಐ ನೇತೃತ್ವದ ಹೌಸ್ ಸರ್ಜನ್ಸ್ ಅಸೋಸಿಯೇಷನ್ ನೀಡಿದ ಪಟ್ಟಿಯ ಪ್ರಕಾರ ಪದವಿ ನೀಡಲಾಗಿದೆ ಎಂದು ಸಂಘಟಕರ ಹೇಳಿಕೆಯಾಗಿದೆ. ಪದವಿ ಪ್ರದಾನ ಸಮಾರಂಭದಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮುಖ್ಯ ಅತಿಥಿಯಾಗಿದ್ದರು. ಆದರೆ ಸಚಿವರು ಆನ್‍ಲೈನ್‍ನಲ್ಲಿ ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಮೋಹನನ್ ಕುನ್ನುಮ್ಮಲ್ ಪ್ರಮಾಣ ಪತ್ರ ವಿತರಿಸಿದ್ದರು.
ಪರೀಕ್ಷೆಯಲ್ಲಿ ಉತ್ತೀರ್ಣರಾಗದವರಿಗೆ ಡಾಕ್ಟರ್ ಪದವಿ; ಆರೋಗ್ಯ ವಿಶ್ವವಿದ್ಯಾನಿಲಯದಿಂದ ಗಂಭೀರ ವೈಫಲ್ಯ: ಪ್ರಮಾಣಪತ್ರ ಹಿಂದಕ್ಕೆ
0
ಡಿಸೆಂಬರ್ 21, 2022