ಅಹ್ಮದಾಬಾದ್: ಭಗವಂತನ ಪಾದಗಳಲ್ಲಿ ಹೀರಾಬೆನ್ ಮೋದಿಯವರು ಲೀನರಾಗಿದ್ದು, ತಾಯಿಯ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ತಾಯಿಯ ನಿಧನಕ್ಕೆ ಸರಣಿ ಟ್ವೀಟ್ ಮಾಡಿ ಮೋದಿಯವರು ಭಾವುಕರಾಗಿದ್ದಾರೆ. ನಮ್ಮ ತಾಯಿಯ ಜೀವನದ ಮೂರು ಹಂತ ಕಂಡಿದ್ದೇನೆ. ತಪಸ್ವೀ ಬದುಕು, ನಿಸ್ವಾರ್ಥತೆ ಪ್ರತೀಕ, ಮೌಲ್ಯಾಧಾರಿತ ಬದ್ಧತೆ ಎಂದು ಸಂತಾಪ ಸೂಚಿಸಿದ್ದಾರೆ.
ಶಾನ್ ದಾರ್ ಶತಾಬ್ದಿ ಕಾ ಈಶ್ವರ್ ಚರಣೋ ಮೇ ವಿರಾಮ್.. ತಾಯಿಯಲ್ಲಿ ಯಾವಾಗಲೂ ತ್ರಿಮೂರ್ತಿಗಳನ್ನು ನಾನು ಕಂಡಿದ್ದೇನೆ. ಅವರ ಬದುಕು ತಪೋ ಸದೃಶ, ನಿಸ್ವಾರ್ಥ ಕರ್ಮಯೋಗಿಯ ಬಾಳ್ವೆ. ಮೌಲ್ಯಗಳಿಗೆ ಬದ್ಧವಾಗಿದ್ದ ತುಂಬು ಜೀವನ..ಅವರಿಗೆ 100 ವರ್ಷ ಪೂರ್ಣವಾದಾಗ ಆಶೀರ್ವಾದ ಪಡೆಯಲು ಭೇಟಿ ನೀಡಿದ್ದೆ. ಆಗ ಅವರು ನೀಡಿದ ಹಿತ ವಚನ ನೆನಪಾಗುತ್ತಿದೆ. ಯಾವಾಗಲೂ ಬುದ್ಧಿವಂತಿಕೆಯಿಂದ ಕೆಲಸಗಳನ್ನು ಮಾಡಿ, ಪರಿಶುದ್ಧತೆಯಿಂದ ಬದುಕಿರಿ ಎಂದು ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ.
ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರ ಅಂತ್ಯಕ್ರಿಯೆ ಇದೇ ನಡೆಯಲಿದ್ದು, ಅಹ್ಮದಾಬಾದ್ ತಲುಪಿರುವ ಪ್ರಧಾನಿ ಮೋದಿಯವರು ತಾಯಿಯ ಪಾರ್ಥೀವ ಶರೀರವನ್ನು ಹೆಗಲ ಮೇಲೆ ಹೊತ್ತು ಅಂತಿಮ ಯಾತ್ರೆಯಲ್ಲಿ ಸಾಗಿದರು.
ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರ ಮನೆಯಿಂದ ಹೀರಾಬೆನ್ ಅವರ ಅಂತಿಮ ಯಾತ್ರೆ ಸಾಗಿದ್ದು, ಈ ವೇಳೆ ತಾಯಿಯ ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟು ಸಾಗಿದರು.
ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಅಹ್ಮದಾಬಾದ್'ಗೆ ತಲುಪಿದರು. ನಂತರ ತಾಯಿಯ ಅಂತಿಮ ದರ್ಶನ ಪಡೆದ ಮೋದಿಯವರು, ಕಾಲಿಗೆ ನಮಸ್ಕರಿಸಿ ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟು ನಡೆದರು. ಹೀರಾಬೆನ್ ಅವರ ಅಂತಿಮ ಸಂಸ್ಕಾರ ಗಾಂಧಿನಗರದ ಸೆಕ್ಟರ್ 30ರ ರುದ್ರಭೂಮಿಯಲ್ಲಿ ನಡೆಯಲಿದೆ.