ಗಯಾ: ಬಿಹಾರದ ಬೋಧ್‌ಗಯಾಕ್ಕೆ ತೀರ್ಥಯಾತ್ರೆ ಬಂದಿರುವ ಥಾಯ್ಲೆಂಡ್‌ನ ನಾಲ್ವರು ಮತ್ತು ಮ್ಯಾನ್ಮಾರ್‌ನ ಒಬ್ಬರು ಸೇರಿ ಐವರು ವಿದೇಶಿ ಪ್ರಜೆಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೌದ್ಧ ಧರ್ಮಗುರು ದಲೈಲಾಮಾ ಅವರ ಈ ವಾರದ ಪ್ರವಚನ ಕೇಳಲು ಬಂದಿದ್ದ ವಿದೇಶಿ ಯಾತ್ರಿಕರನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯಮಾನುಸಾರ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.
ಸೋಂಕಿತರಲ್ಲಿ ನಾಲ್ವರು ಮಹಿಳೆಯರಿದ್ದಾರೆ. ವಾರಾಂತ್ಯದಲ್ಲಿ 33 ವಿದೇಶಿಯರನ್ನು ಪರೀಕ್ಷಿಸಲಾಯಿತು ಎಂದು ಗಯಾ ಜಿಲ್ಲೆಯ ವೈದ್ಯಕೀಯ ಉಸ್ತುವಾರಿ ಅಧಿಕಾರಿ ಡಾ.ರಂಜನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
'ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರನ್ನು ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಏತನ್ಮಧ್ಯೆ, ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಮತ್ತು ಗಯಾ ರೈಲ್ವೆ ನಿಲ್ದಾಣದಲ್ಲಿ ಪರೀಕ್ಷೆ ತೀವ್ರಗೊಳಿಸಲಾಗಿದೆ' ಎಂದು ಅವರು ಹೇಳಿದರು.
ಸಕ್ರಿಯ ಪ್ರಕರಣಗಳು ಏರಿಕೆ:
ದೇಶದಲ್ಲಿ ಕೋವಿಡ್ ಸೋಂಕಿನ 196 ಹೊಸ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,428ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.
ದೇಶದಲ್ಲಿ ಒಟ್ಟು 4.46 ಕೋಟಿ ಕೋವಿಡ್ ಪ್ರಕರಣಗಳು ದಾಖಲಾದಂತಾಗಿದೆ. ಸೋಮವಾರ ಬೆಳಿಗ್ಗೆ 8 ಗಂಟೆವರೆಗಿನ ಮಾಹಿತಿ ಪ್ರಕಾರ ಕೇರಳದಲ್ಲಿ ಕೋವಿಡ್‌ನಿಂದ ಇಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 5,30,695ಕ್ಕೆ ಏರಿಕೆಯಾಗಿದೆ.
ನಿತ್ಯ ಕೋವಿಡ್ ಪ್ರಕರಣಗಳು ದೃಢಪಡುವ ಪ್ರಮಾಣ ಶೇ 0.50ರಷ್ಟು ಇದೆ. ಕೋವಿಡ್ ಪತ್ತೆಗೆ ಕಳೆದ 24 ತಾಸುಗಳಲ್ಲಿ 35,173 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.01ರಷ್ಟಿದ್ದರೆ, ಚೇತರಿಕೆಯ ಪ್ರಮಾಣ ಶೇ 98.80ಕ್ಕೆ ಏರಿದೆ. ಮರಣ ಪ್ರಮಾಣ ಶೇ 1.19ರಷ್ಟಿದೆ ಎಂದು ಸಚಿವಾಲಯ ಹೇಳಿದೆ.
ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಇದುವರೆಗೆ ದೇಶದಾದ್ಯಂತ ಒಟ್ಟು 220.05 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.