ಕೊಚ್ಚಿ: ನವ ವಿವಾಹಿತರು ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳುವುದು ಸದ್ಯದ ಟ್ರೆಂಡ್. ಹೊಸ ಹೊಸ ಕಾನ್ಸೆಪ್ಟ್ ಮೂಲಕ ವಿಭಿನ್ನ ಮಾದರಿಯ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ನಮ್ಮ ಫೋಟೋಶೂಟ್ ವಿಭಿನ್ನವಾಗಿರಬೇಕೆಂದು ನವ ಜೋಡಿಗಳು ಸಾಹಸಕ್ಕೂ ರೆಡಿಯಿರುತ್ತಾರೆ.
ಇವರ ಸಾಹಸ ಕೆಲವು ಬಾರಿ, ಹಲವು ಅವಾಂತರಗಳಿಗೆ ದಾರಿ ಮಾಡಿಕೊಡುತ್ತದೆ. ಈ ಹಿಂದೆ ವೆಡ್ಡಿಂಗ್ ಫೋಟೋಶೂಟ್ ವೇಳೆ ಜೀವಕ್ಕೇ ಹಾನಿ ಮಾಡಿಕೊಂಡಿರುವ ಸಂಗತಿಗಳನ್ನು ಕೇಳಿದ್ದೆವು.
ಇದೀಗ ಕೇರಳದ ಪ್ರಸಿದ್ಧ ಗುರುವಾಯೂರ್ ದೇವಸ್ಥಾನದಲ್ಲಿ ನವವಿವಾಹಿತ ದಂಪತಿಗಳು ಫೋಟೋ ಸೆಶನ್‌ಗೆ ಮುಂದಾಗಿದ್ದಾರೆ. ಫೋಸ್ ನೀಡುತ್ತಿರುವಾಗ ಹಿಂದೆ ಇದ್ದಂತಹ ಆನೆ ವಿಚಲಿತಗೊಂಡಿದೆ. ಇದರಿಂದ ಅಲ್ಲಿದ್ದ ಜನರು ಕಡಿಮೆ ಅಂತರದಲ್ಲಿ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಕೊನೆಗೆ ನವಜೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವರದಿಯ ಪ್ರಕಾರ, ಈ ಘಟನೆ ನವೆಂಬರ್ 10 ರಂದು ಗುರುವಾಯೂರು ದೇವಸ್ಥಾನದ ಹೊರಾಂಗಣದಲ್ಲಿ ಸಂಭವಿಸಿದೆ. ಆನೆ ವಿಚಲಿತಗೊಂಡ ವೇಳೆ, ಅಲ್ಲಿದ್ದ ಜನರು ಬೆಚ್ಚಿ ಬಿದ್ದಿರುವುದನ್ನು ಗಮನಿಸಬಹುದು.
ಫೋಟೋಗ್ರಾಫರ್ ನವ ದಂಪತಿಗಳ ಫೋಟೋ ಕ್ಲಿಕ್ಕಿಸಲು ಪ್ರಾರಂಭಿಸುತ್ತಿದ್ದಂತೆ, ದಂಪತಿಗಳ ಹಿಂಭಾಗದಲ್ಲಿದ್ದ ಆನೆ ಉದ್ರೇಕಗೊಂಡಿದೆ. ನಂತರ ಅಲ್ಲಿದ್ದ ಜನರ ಮೇಲೆ ದಾಳಿ ಮಾಡಲು ಮುಂದಾಗುತ್ತದೆ. ಈ ವೇಳೆ ವ್ಯಕ್ತಿಯೊಬ್ಬನನ್ನು ಸೊಂಡಿಲಿನಿಂದ ಎತ್ತಿಕೊಳ್ಳಲು ಮುಂದಾಗುತ್ತದೆ. ಕೂದಲೆಳೆ ಅಂತರದಲ್ಲಿ ಕೆಳಗೆ ಬಿದ್ದ ವ್ಯಕ್ತಿ ತಪ್ಪಿಸಿಕೊಳ್ಳುತ್ತಾನೆ. ಇಷ್ಟಕ್ಕೆ ಸುಮ್ಮನಾಗದ ಆನೆ, ಆ ವ್ಯಕ್ತಿಯ ಪಂಚೆಯನ್ನು ಎಳೆಯುತ್ತದೆ.
ಈ ಘಟನೆಯನ್ನು ನವ ಜೋಡಿಗಳು ನೆನಪಿಸಿಕೊಂಡಿದ್ದು, ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಜನರೆಲ್ಲರೂ ಕಿರುಚಲು ಆರಂಭಿಸಿದರು. ಈ ವೇಳೆ ಹಿಂತಿರುಗಿ ನೋಡಿದಾಗ ಆನೆ ಕೆರಳಿತ್ತು. ಕೂಡಲೇ ಪತ್ನಿಯ ಕೈ ಹಿಡಿದು ಓಡಿದೆವು ಎಂದು ಹೇಳಿದ್ದಾರೆ.