ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತವು ಅಲ್ಲಿನ ಎಲ್ಲಾ ಕುಟುಂಬಗಳ ಡೇಟಾಬೇಸ್ ರಚಿಸಿ ಪ್ರತಿ ಕುಟುಂಬಕ್ಕೂ ಒಂದು ವಿಶಿಷ್ಟ ಆಲ್ಫಾ ನ್ಯೂಮರಿಕ್ ಕೋಡ್ ಒದಗಿಸಲಿದೆ ಎಂದು ವರದಿಗಳು ತಿಳಿಸಿವೆ.
ಡೇಟಾಬೇಸ್- ಜೆಕೆ ಫ್ಯಾಮಿಲಿ ಐಡಿ- ಅನ್ನು ವಿವಿಧ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಅರ್ಹತೆಯನ್ನು ನಿರ್ಧರಿಸಲು ಬಳಸಲಾಗುವುದು. ಒಮ್ಮೆ ಈ ಜೆಕೆ ಫ್ಯಾಮಿಲಿ ಐಡಿ ಡೇಟಾಬೇಸ್ ಡೇಟಾ ದೃಢೀಕರಣಗೊಂಡ ನಂತರ ಫಲಾನುಭವಿ ಯಾವುದೇ ಯೋಜನೆಯ ಪ್ರಯೋಜನ ಪಡೆಯಲು ಬೇರೆ ದಾಖಲೆ ಸಲ್ಲಿಸುವ ಅಗತ್ಯವಿಲ್ಲ ಎಂದು ಜಮ್ಮು ಕಾಶ್ಮೀರ ಮಾಹಿತಿ ತಂತ್ರಜ್ಞಾನ ಇಲಾಖೆಯ ಆಯುಕ್ತ-ಕಾರ್ಯದರ್ಶಿ ಪ್ರೇರಣಾ ಪುರಿ ಹೇಳಿದ್ದಾರೆ.
ಕಳೆದ ತಿಂಗಳು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರೀಯಾಸಿ ಜಿಲ್ಲೆಯ ಕತ್ರಾ ನಗರದಲ್ಲಿ ನಡೆದ ಇ-ಗವರ್ನೆನ್ಸ್ ಸಮ್ಮೇಳನದಲ್ಲಿ ಅನಾವರಣಗೊಳಿಸಿದ ʻಡಿಜಿಟಲ್ ಜೆ &ಕೆ ವಿಷನ್ ಡಾಕ್ಯುಮೆಂಟ್" ಭಾಗ ಇದಾಗಿದೆ.
ಬಿಜೆಪಿ ಈ ಕ್ರಮವನ್ನು ಶ್ಲಾಘಿಸಿದರೂ ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳು ಮತ್ತು ಕಾಂಗ್ರೆಸ್ ತಮ್ಮ ಆತಂಕ ತೋಡಿಕೊಂಡಿವೆ. ಈ ಡೇಟಾಬೇಸ್‌ನಿಂದ ವೈಯಕ್ತಿಕ ಮಾಹಿತಿಗಳ ಗೌಪ್ಯತೆ ಅಪಾಯದಲ್ಲಿರಬಹುದೆಂಬ ಕಳವಳ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, "ಕಾಶ್ಮೀರಿಗಳನ್ನು ಸಂದೇಹದಿಂದ ನೋಡಲಾಗುತ್ತಿದೆ ಹಾಗೂ ಇದು ಅವರ ಜೀವನಗಳ ಮೇಲೆ ಹಿಡಿತ ಸಾಧಿಸುವ ಒಂದು ಯತ್ನ," ಎಂದಿದ್ದಾರೆ.