ಕಾಸರಗೋಡು: ಕೇರಳದ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿರತ ಹಾಗೂ ಲಂಚಕ್ಕಾಗಿ ಕೈಯೊಡ್ಡುವ ಪೊಲೀಸರ ಪತ್ತೆಗಾಗಿ ರಾಜ್ಯ ಇಂಟೆಲಿಜೆನ್ಸ್(ಗುಪ್ತಚರ)ವಿಭಾಗ ರಾಜ್ಯಾದ್ಯಂತ ಕಾರ್ಯಾಚರಣೆಗಿಳಿದಿದೆ. ರಾಜ್ಯ ಇಂಟೆಲಿಜೆನ್ಸ್ ವಿಭಾಗ ಎಡಿಜಿಪಿ ಡಾ. ವಿನೋದ್‍ಕುಮಾರ್ ಅವರ ಮೇಲ್ನೋಟದಲ್ಲಿ ಗುಪ್ತ ಕರ್ಯಾಚರಣೆ ನಡೆಯುತ್ತಿದೆ. ಕಾಸರಗೋಡು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಗುಪ್ತ ಕಾರ್ಯಾಚರಣೆ ನಡೆಯುತ್ತಿದ್ದು, ಭ್ರಷ್ಟಾಚಾರಿ ಹಾಗೂ ಲಂಚಕೋರ ಪೊಲೀಸರ ಮಾಹಿತಿ ಸಂಗ್ರಹಿಸಲಗುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ತಯಾರಿಸಿದ ಯಾದಿಯಲ್ಲಿ ಪೊಲೀಸ್ ಕಾನ್‍ಸ್ಟೇಬಲ್‍ಗಳು ಹಾಗೂ ಪೊಲೀಸ್ ಅಧಿಕಾರಿಗಳ ಹೆಸರೂ ಒಳಗೊಂಡಿದ್ದು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ರವಾನಿಸಲಾಗಿದೆ. ಇದರ ಆಧಾರದಲ್ಲಿ ರಾಜ್ಯ ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಸೂಚನೆಯಿದೆ. ಇಂತಹ ಕಾರ್ಯಾಚರಣೆಗೆ ಇದೇ ಮೊದಲಬಾರಿಗೆ ಚಾಲನೆ ನೀಡಲಾಗಿದ್ದು, ಮುಂದೆ ಪ್ರತಿ ತಿಂಗಳು ಮಾಹಿತಿಸಂಗ್ರಹ ಕಾರ್ಯ ನಡೆಯಲಿರುವುದಾಗಿ ಸೂಚನೆಯಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ 828ಮಂದಿ ಪೊಲೀಸರು ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿದ್ದು, ಇವರ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರಿ, ಲಂಚಕೋರರ ಪತ್ತೆಗಾಗಿ ಗುಪ್ತಚರ ವಿಭಾಗ ಕಾರ್ಯಾಚರಣೆ
0
ಡಿಸೆಂಬರ್ 17, 2022
Tags