ನವದೆಹಲಿ: ಭಾರತ ರಾಷ್ಟ್ರೀಯ ಪತ್ರಾಗಾರ (ಎನ್‌ಎಐ) ಬಳಿ 1962, 1965 ಹಾಗೂ 1971ರ ಯುದ್ಧಗಳಿಗೆ ಹಾಗೂ ಹಸಿರುಕ್ರಾಂತಿಗೆ ಸಂಬಂಧಿಸಿದ ದಾಖಲೆಗಳೇ ಇಲ್ಲ ಎಂದು ಎನ್‌ಎಐ ಪ್ರಧಾನ ನಿರ್ದೇಶಕ ಚಂದನ್ ಸಿನ್ಹಾ ಶುಕ್ರವಾರ ಹೇಳಿದ್ದಾರೆ.
ಈ ಮೂರು ಯುದ್ಧಗಳು ಹಾಗೂ ಹಸಿರು ಕ್ರಾಂತಿ ಕುರಿತ ದಾಖಲೆಗಳನ್ನು ಸಂಬಂಧಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳು ಎನ್‌ಎಐನೊಂದಿಗೆ ಹಂಚಿಕೊಳ್ಳದಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
'ಸುಶಾಸನ ದಿನ' ಅಂಗವಾಗಿ ಆಡಳಿತಾತ್ಮಾಕ ಸುಧಾರಣೆಗಳು ಹಾಗೂ ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
'ದಾಖಲೆಗಳ ಸಮರ್ಪಕ ನಿರ್ವಹಣೆ ಅಗತ್ಯ. ಇದು ಉತ್ತಮ ಆಡಳಿತದ ತಿರುಳಾಗಿದೆ' ಎಂದ ಅವರು, 'ಹಲವಾರು ಸಚಿವಾಲಯಗಳು ಸ್ವಾತಂತ್ರ್ಯ ನಂತರದ ದಿನಗಳಿಂದಲೂ ತಮ್ಮ ದಾಖಲೆಗಳನ್ನು ಸಂಸ್ಥೆಯೊಂದಿಗೆ ಹಂಚಿಕೊಂಡಿಲ್ಲ' ಎಂದು ವಿಷಾದಿಸಿದರು.