ನವದೆಹಲಿ : ನವದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ(New Delhi International Arbitration Centre) ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಹೇಮಂತ್ ಗುಪ್ತಾ ಅವರನ್ನು ಕೇಂದ್ರವು ಬುಧವಾರ ನೇಮಿಸಿದೆ ಎಂದು livelaw.com ವರದಿ ಮಾಡಿದೆ.
DIAC ಅನ್ನು 2019 ರಲ್ಲಿ ಸ್ಥಾಪಿಸಲಾಗಿದ್ದು, ಇದು ಮಧ್ಯಸ್ಥಿಕೆ, ಸಂಧಾನ ಮತ್ತು ರಾಜಿ ಪ್ರಕ್ರಿಯೆಗಳನ್ನು ನಡೆಸಲು ಇರುವ ಸ್ವಾಯತ್ತ ಸಂಸ್ಥೆಯಾಗಿದೆ.
ಜಸ್ಟೀಸ್ ಗುಪ್ತಾ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದು ಇತ್ತೀಚೆಗೆ ತೀರ್ಪು ನೀಡಿದ್ದರು.
ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ಬಗ್ಗೆ ʼಭಿನ್ನʼ ತೀರ್ಪು ನೀಡಿದ ದ್ವಿಸದಸ್ಯ ಪೀಠದ ಭಾಗವಾಗಿದ್ದ ಗುಪ್ತಾ ಅವರು, 'ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿರಬಹುದು ಅಥವಾ ಅಲ್ಲದಿರಬಹುದು, ಆದರೆ ವೈಯಕ್ತಿಕ ನಂಬಿಕೆಯನ್ನು ರಾಜ್ಯವು ನಿರ್ವಹಿಸುವ ಜಾತ್ಯತೀತ ಶಾಲೆಗೆ ಸಾಗಿಸಲು ಸಾಧ್ಯವಿಲ್ಲ' ಎಂದು ಹೇಳಿ ಹಿಜಾಬ್ ಪರ ವಿದ್ಯಾರ್ಥಿನಿಯರ ಅರ್ಜಿಯನ್ನು ತಳ್ಳಿ ಹಾಕಿದ್ದರು.
ಅದಾಗ್ಯೂ, ದ್ವಿ ಸದಸ್ಯ ನ್ಯಾಯಪೀಠದ ಮತ್ತೊಬ್ಬರ ಸದಸ್ಯರಾದ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಕರ್ನಾಟಕ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿ, ತಮ್ಮ ತೀರ್ಪಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ್ದರು.
ನ್ಯಾಯಮೂರ್ತಿ ಗುಪ್ತಾರನ್ನು ನವೆಂಬರ್ 2, 2018 ರಂದು ಸುಪ್ರೀಂ ಕೋರ್ಟ್‌ಗೆ ಮೇಲ್ದರ್ಜೆಗೇರಿಸಲಾಗಿತ್ತು. ಗುಪ್ತಾ ಅವರು ಅಕ್ಟೋಬರ್ 16 ರಂದು ನಿವೃತ್ತರಾಗಿದ್ದು, ಅವರು ಈ ಹಿಂದೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು ಎಂದು livelaw ವರದಿ ಮಾಡಿದೆ.