ಡೆಡ್ ಬಟ್ ಸಿಂಡ್ರೋಮ್ ಬಗ್ಗೆ ಕೇಳಿದ್ದೀರಾ? ನೀವು ತುಂಬಾ ಹೊತ್ತು ಒಂದೇ ಕಡೆ ಕೂತುಕೊಂಡು ಕೆಲಸ ಮಾಡುವವರಾದರೆ ಈ ಕಾಯಿಲೆ ನಿಮಗೂ ಬರಬಹುದು ಹುಷಾರ್!
ಏನಿದು ಡೆಡ್ ಬಟ್ ಸಿಂಡ್ರೋಮ್? ಇದನ್ನು ತಡೆಗಟ್ಟಲು ಎನು ಮಾಡಬೇಕು ಎಂದು ನೋಡೋಣ ಬನ್ನಿ:
ಡೆಡ್ ಬಟ್ ಸಿಂಡ್ರೋಮ್ ಎಂದರೇನು?
ನಮ್ಮಲ್ಲಿ ಹೆಚ್ಚಿನವರು ಒಂದೇ ಕಡೆ ಕೂತು ಕೆಲಸ ಮಾಡುತ್ತಿದ್ದೇವೆ ಅಲ್ವಾ? ಆಫೀಸ್ ವರ್ಕ್, ಟೈಲರಿಂಗ್, ಡ್ರೈವಿಂಗ್ ಕೆಲಸ ಹೀಗೆ ಕೆಲವೊಂದು ಕೆಲಸಗಳಲ್ಲಿ ನಾವು ಹೆಚ್ಚು ಹೊತ್ತು ಕೂತುಕೊಂಡೇ ಇರುತ್ತೇವೆ. ಹೀಗೆ ಒಂದೇ ಕಡೆ ಕೂರುವುದರಿಂದ ನಮ್ಮ ಹಿಂಭಾಗದ ನರಗಳಿಗೆ ಹಾನಿಯುಂಟಾಗುತ್ತದೆ. ಇದರಿಂದಾಗಿ ಸೊಂಟದ ಕೆಳಗಡೆ ಹಾಗೂ ಕಾಲುಗಳಿಗೆ ಹಾನಿಯುಂಟಾಗುತ್ತದೆ. ಇದಕ್ಕೆ ಡೆಡ್ ಬಟ್ ಸಿಂಡ್ರೋಮ್ ಎಂದು ಕರೆಯಲಾಗುವುದು.
ಈ ಡೆಡ್ ಬಟ್ ಸಿಂಡ್ರೋಮ್‌ನಿಂದಾಗಿ ಈ ಬಗೆಯ ಅಪಾಯಗಳು ಉಂಟಾಗುವುದು:
ಮಸಲ್ ಅಮ್ನೇಷಿಯಾ
ದೇಹದ ಪ್ರತಿಯೊಂದು ನರವೂ ಕಾರ್ಯ ಮಾಡಬೇಕು. ಯಾವುದಾದರೂ ಒಂದು ನರದಲ್ಲಿ ವ್ಯತ್ಯಾಸ ಉಂಟಾದರೂ ಆರೋಗ್ಯ ಸಮಸ್ಯೆ ಉಂಟಾಗುವುದು. ತುಂಬಾ ಹೊತ್ತು ಒಂದೇ ಕಡೆ ಕೂತು ಕೆಲಸ ಮಾಡುವುದರಿಂದ ನಿಮ್ಮ ಹಿಂಭಾಗದ ನರ ಅದರ ಕಾರ್ಯವನ್ನೇ ಮರೆತು ಬಿಡುತ್ತದೆ. ಆ ನರಗಳ ಪ್ರಮುಖ ಕಾರ್ಯ ಪೆಲ್ವಿಕ್ ಭಾಗವನ್ನು ಸಪೋರ್ಟ್ ಮಾಡಿ, ದೇಹ ಸರಿಯಾದ ಆಕಾರದಲ್ಲಿ ಇರುವಂತೆ ಮಾಡುವುದು.
ಆದರೆ ತುಂಬಾ ಹೊತ್ತು ಕೂತಾಗ ಈ ನರಗಳು ದುರ್ಬಲವಾಗುತ್ತಾ ಹೀಗುವುದು, ಇದರಿಂದಾಗಿ ಬೆನ್ನುನೋವು ಕಂಡು ಬರುವುದು.
ಓಟಗಾರರಿಗೆ ತುಂಬಾನೇ ತೊಂದರೆಯಾಗುವುದು
ನೀವು ಓಟಗಾರರಾಗಿದ್ದರೆ ತುಂಬಾ ಹೊತ್ತು ಕೂತು ಮಾಡುವ ಕೆಲಸ ಒಳ್ಳೆಯದಲ್ಲ, ಇದರಿಂದ ನಿಮ್ಮ ಓಡುವ ಸಾಮರ್ಥ್ಯಕ್ಕೆ ಹೊಡೆತ ಬೀಳುತ್ತದೆ.
ಕಾಲುಗಳಲ್ಲಿ ಊತ ಕಂಡು ಬರುವುದು
ನೀವು ತುಂಬಾ ಹೊತ್ತು ಒಂದೇ ಕಡೆ ಕೂತು ಕೆಲಸ ಮಾಡುವುದರಿಂದ ಕಾಲುಗಳಲ್ಇ ಊತ ಕಂಡು ಬರುತ್ತದೆ.
ಮೈ ತೂಕ ಹೆಚ್ಚುವುದು
ಒಂದೇ ಕಡೆ ತುಂಬಾ ಹೊತ್ತು ಕೂರುವುದರಿಂದ ಒಬೆಸಿಟಿ ಸಮಸ್ಯೆ ಹೆಚ್ಚಾಗುವುದು. ದೇಹಕ್ಕೆ ಯಾವುದೇ ವ್ಯಾಯಾಮ ಇಲ್ಲದೇ ಹೀದಾಗ ಕೊಲೆಸ್ಟ್ರಾಲ್, ಮಧುಮೇಹ, ಅಧಿಕ ರಕ್ತದೊತ್ತಡ ಈ ಬಗೆಯ ಸಮಸ್ಯೆಗಳು ಹೆಚ್ಚಾಗುವುದು.
ಕೂತು ಕೆಲಸ ಮಾಡುವವರು ಏನು ಮಾಡಬೇಕು?
ಕೆಲವೊಂದು ಕೆಲಸಗಳನ್ನು ಕೂತುಕೊಂಡೇ ಮಾಡಬೇಕು. ಆದರೆ ಕೆಲಸ-ಕೆಲಸ ಅಂತ ಒಂದೇ ಕಡೆ ಕೂತು ಕೊಂಡೇ ಇರಬೇಡಿ, ಎದ್ದು ಓಡಾಡಿ. 45 ನಿಮಿಷಕ್ಕೊಮ್ಮೆ ಕೂತ ಜಾಗದಿಂದ ಎದ್ದು ಸ್ವಲ್ಪ ನಡೆದಾಡಿ ಕೂರಿ. ಇನ್ನು ಕೂತ ಜಾಗದಲ್ಲಿಯೇ ಮೈಲ್ಡ್ ವ್ಯಾಯಾಮ ಮಾಡಿ.
ಗ್ಲುಟೆ ಸ್ಕ್ವೀಜ್ ಮಾಡಿ ( Glute squeeze)
* ಲಂಬಾಕಾರವಾಗಿ ನಿಂತುಕೊಳ್ಳಿ. ಈಗ ನಿಧಾನಕ್ಕೆ ಉಸಿರನ್ನು ತೆಗೆದುಕೊಳ್ಳುತ್ತಾ ಹಿಮ್ಮಡಿ ಮೇಲೆತ್ತಿ, ನಿಧಾನವಾಗಿ ಉಸಿರು ಬಿಡುತ್ತಾ ಪಾದಗಳನ್ನು ನೆಲಕ್ಕೆ ಮುಟ್ಟಿಸಿ, ಈ ರೀತಿ 10 ಬಾರಿ ಮಾಡಿ. ಈ ರೀತಿ ಬೆಳಗ್ಗೆ ಮತ್ತು ಸಂಜೆ ಮಾಡಿ.
ಲೆಗ್ ಲಿಫ್ಟ್ ಕೂಡ ಸಹಕಾರಿ
* ಮ್ಯಾಟ್ ಹಾಸಿ ನಿಮ್ಮ ಬೆನ್ನಿ ಮೇಲೆ ಮಲಗಿ, ಕೈಗಳನ್ನು ನಿಮ್ಮ ಪಕ್ಕಕ್ಕೆ ಇಟ್ಟುಕೊಳ್ಳಿ.
* ಈಗ ಬಲಗಾಲು ಹಾಗೂ ಎಡಗೈಯನ್ನು ಲಂಬಾಕಾರವಾಗಿ ಮೇಲಕ್ಕೆ ಎತ್ತಿ, ನಂತರ ನಿಧಾನಕ್ಕೆ ಕೆಳಗಡೆ ಇಳಿಸಿ, ಹೀಗೆ ಬಲಗಾಲು ಎಡಗೈ ಕೆಳಗಿಸುವಾಗ ಎಡಗಾಲು ಹಾಗೂ ಬಲಗೈ ನಿಧಾನಕ್ಕೆ ಮೇಲಕ್ಕೆ ಎತ್ತಬೇಕು. ಈ ವ್ಯಾಯಮ ದಿನಾ 10-15 ನಿಮಿಷ ಮಾಡಿದರೆ ಸೊಂಟ ನೋವು ಕಡಿಮೆಯಾಗುವುದು.
ಕೊನೆಯದಾಗಿ: ತುಂಬಾ ಹೊತ್ತು ಕೂರುವುದು ಮನುಷ್ಯರಿಗೆ ಒಳ್ಳೆಯದಲ್ಲ, ಆದ್ದರಿಂದ ಎಷ್ಟೇ ಕೆಲಸದ ಒತ್ತಡವಿದ್ದರೂ ನಿಮ್ಮ ಆರೋಗ್ಯಕ್ಕಾಗಿ ಒಂದು ಗಂಟೆಗೊಮ್ಮೆ ಬ್ರೇಕ್ ತಗೊಂಡು ನೀರು ಕುಡಿಯಲು ಹೋಗುವುದು ಅಥವಾ ವಾಶ್ ರೂಂಗೆ ಹೋಗುವುದು ಮಾಡಿ. ಇನ್ನು ಫೋನ್‌ನಲ್ಲಿ ಮಾತನಾಡುವಾಗ ಕೂತು ಮಾತನಾಡಬೇಡಿ, ನಡೆದಾಡುತ್ತಾ ಮತನಾಡಿ. ಹೀಗೆ ಮಾಡುವುದರಿಂದ ದೇಹಕ್ಕೆ ಸ್ವಲ್ಪ ವ್ಯಾಯಾಮ ಸಿಗುವುದು.