ನವದೆಹಲಿ:ಬ್ಯಾಂಕ್ ಸಾಲಗಳ ರೈಟ್-ಆಫ್‌ಗಳ ನಂತರ ಸಣ್ಣು ಠೇವಣಿದಾರರ ಹಣ ವಾಪಸಾತಿ ದೀರ್ಘ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ ಎಂದು ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.
ಠೇವಣಿ ಹಣ ವಿದ್‌ಡ್ರಾ ಮಾಡುವುದಕ್ಕೆ ಹೇರಲಾಗಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಠೇವಣಿದಾರರು ದಿಲ್ಲಿ ಹೈಕೋರ್ಟ್ ಕದವನ್ನು ತಟ್ಟಿದ ಪ್ರಕರಣವನ್ನು ಉಲ್ಲೇಖಿಸಿ, ಗ್ರಾಹಕರ ಹಣ ವಾಪಸಾತಿ ಕುರಿತ ಪ್ರಕ್ರಿಯೆಯ ಬಗ್ಗೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಕೇಳಿದ ಪ್ರಶ್ನೆಯೊಂದಕ್ಕೆ ಸಚಿವೆ ಉತ್ತರಿಸುತ್ತಿದ್ದರು.
ಹಲವಾರು ಕಂಪೆನಿಗಳಿಗೆ ಸಾಲ ಒದಗಿಸಿದ್ದ ಈ ಬ್ಯಾಂಕ್ ನಂತರ ತನ್ನ ಎಲ್ಲಾ ಎನ್‌ಪಿಎಗಳನ್ನು ವರದಿ ಮಾಡದೇ ಇರುವ ಆರೋಪ ಎದುರಿಸುತ್ತಿದೆ. ಈ ರೂ. 4,355 ಕೋಟಿ ಮೌಲ್ಯದ ಹಗರಣವು 2019 ರಲ್ಲಿ ಸಮಸ್ಯೆ ಸೃಷ್ಟಿಸಿತ್ತು. ಸೆಪ್ಟೆಂಬರ್ 2019 ರಲ್ಲಿ ಆರ್‌ಬಿಐ ಈ ಬ್ಯಾಂಕ್ ಗ್ರಾಹಕರಿಗೆ ರೂ. 1000 ಹಣವನ್ನು ಆರು ತಿಂಗಳು ವಿದ್‌ಡ್ರಾ ಮಾಡಲು ಅನುಮತಿಸಿದ್ದರೆ ನಂತರ ಅದನ್ನು ರೂ. 25,000 ಹಾಗೂ ಅಕ್ಟೋಬರ್ 2019 ರಲ್ಲಿ ರೂ. 40,000 ಕ್ಕೆ ಏರಿಸಲಾಗಿತ್ತು.
"ಈ ಪ್ರಕ್ರಿಯೆ ಹಲವು ಪದರಗಳನ್ನು ಹೊಂದಿದೆ ಹಾಗೂ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಸಾಲ ವಾಪಸಾತಿ ನೀಡದೇ ಇರುವ ಹಲವರು ಇರಬಹುದು, ಇಂತಹವರ ಆಸ್ತಿ ಜಪ್ತಿ ಮಾಡಿದರೂ ನಂತರ ನ್ಯಾಯಾಲಯದ ಕ್ಲಿಷ್ಟಕರ ಪ್ರಕ್ರಿಯೆ ಇದೆ," ಎಂದು ಸಚಿವೆ ಹೇಳಿದರು.
ಪಿಎಂಸಿ ಬ್ಯಾಂಕ್ ಹಗರಣವನ್ನು ಉಲ್ಲೇಖಿಸಿದ ಅವರು, ಏಜನ್ಸಿಗಳು ವಶಪಡಿಸಿಕೊಂಡು ಕೆಲ ಸ್ವತ್ತುಗಳ ಬಿಡುಗಡೆಗೆ ಕೋರ್ಟುಗಳನ್ನು ಕೇಂದ್ರ ಕೋರಿಕೊಂಡರೂ ಇದಕ್ಕೆ ಅನುಮತಿಸುವ ಸಾಧ್ಯತೆಯಿಲ್ಲ, ನ್ಯಾಯ ದೊರೆಯುವಷ್ಟರಲ್ಲಿ ಅದಾಗಲೇ ಹಲವು ಸಣ್ಣ ಠೇವಣಿದಾರರು ಬಹಳಷ್ಟು ಸಮಸ್ಯೆ ಎದುರಿಸಿರುತ್ತಾರೆ, ಈ ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ ಎಂದು ಅವರು ಹೇಳಿದರು.