ಕುಂಬಳೆ: ನವಕರ್ನಾಟಕ ಚಲನಚಿತ್ರ ಅಕಾಡೆಮಿಯು ನಡೆಸುವ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022 ರ ಕಿರುಚಿತ್ರ ವಿಭಾಗದಲ್ಲಿ ಶ್ರೇಷ್ಠ ಆರೋಗ್ಯ ಜಾಗೃತಿ ಮೂಡಿಸುವ ಕನ್ನಡ ಕಿರುಚಿತ್ರವಾಗಿ ಕಾಸರಗೋಡಿನ ಬಾಲಪ್ರತಿಭೆ ಎಂ.ಎಸ್. ಸಾಯಿಕೃಷ್ಣ ರಚಿಸಿ, ನಿರ್ದೇಶಿಸಿದ "ಪರಿವರ್ತನೆ" ಆಯ್ಕೆಯಾಗಿದೆ. ಈ ಬಗ್ಗೆ ಅಕಾಡೆಮಿ ಅಧ್ಯಕ್ಷ ಡಾ. ಎಂ. ಎ. ಮಮ್ಮಿಗಟ್ಟಿ ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಡಿ.8 ರಿಂದ 10 ರ ವರೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಚಲನಚಿತ್ರೋತ್ಸವ ಜರಗಲಿದ್ದು, 10ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.
ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣದ ಸಂದೇಶ ಸಾರುವ ಕಥಾ ಹಂದರವನ್ನೊಳಗೊಂಡ ಕಿರುಚಿತ್ರದ ಕಥೆ, ಚಿತ್ರಕತೆ, ನಿರ್ದೇಶನವನ್ನು ಎಂ. ಎಸ್. ಸಾಯಿಕೃಷ್ಣ ನಿರ್ವಹಿಸಿದ್ದು, ಮತ್ತೋರ್ವ ಬಾಲಪ್ರತಿಭೆ ಆದಿತ್ಯ ಎಸ್. ಆರ್. ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಸರಗೋಡಿನ ಹಿರಿಯ ಕಲಾವಿದ ವಾಸು ಬಾಯಾರ್, ದಯಾ ಪಿಲಿಕುಂಜೆ, ಸ್ವಪ್ನಾ. ಬಿ, ಪ್ರಣವಿ ಬೇಕಲ್, ಎಂ. ಎಸ್. ಕೃಷ್ಣ ಕುಮಾರ್ ಇತರ ಪಾತ್ರಗಳಲ್ಲಿ ಮಿಂಚಿದ್ದಾರೆ. ಕಾಸರಗೋಡಿನ ಆಸುಪಾಸಿನಲ್ಲಿ ಏಕದಿನದಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿ ಸ್ಪರ್ಧೆಗೆ ಸಜ್ಜುಗೊಳಿಸಿದ ಕೀರ್ತಿ ಸದ್ರಿ ಕಿರುಚಿತ್ರಕ್ಕಿದೆ.
ವಿದ್ಯಾನಗರ ಚಿನ್ಮಯ ವಿದ್ಯಾಲಯದ 10 ನೇ ತರಗತಿ ವಿದ್ಯಾರ್ಥಿಯಾದ ಎಂ. ಎಸ್. ಸಾಯಿಕೃಷ್ಣ ಈಗಾಗಲೇ 12ರಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾನೆ. ಚಿತ್ರನಟನಾಗಿಯೂ ಗುರುತಿಸಲ್ಪಟ್ಟಿದ್ದಾನೆ. ಕೇರಳ ಸಾರಿಗೆ ಸಂಸ್ಥೆ ಉದ್ಯೋಗಿ ಎಂ. ಎಸ್. ಕೃಷ್ಣ ಕುಮಾರ್ - ಶಿಕ್ಷಕಿ ಸ್ವಪ್ನಾ. ಬಿ ದಂಪತಿಯ ಸುಪುತ್ರ.
ಪತ್ರಕರ್ತ ರವಿ ನಾಯ್ಕಾಪು- ಶಿಕ್ಷಕಿ ಸುನೀತಾ ದಂಪತಿಯ ಪುತ್ರ ಆದಿತ್ಯ ಎಸ್. ಆರ್ ಪ್ಲಸ್ ವನ್ ವಿದ್ಯಾರ್ಥಿ. ಚಲನಚಿತ್ರ, ಕಿರುಚಿತ್ರಗಳಲ್ಲಿ ಅಭಿನಯಿಸಿದ್ದು, 2019 ರ ದ.ಕ. ಜಿಲ್ಲಾ ರಾಜ್ಯೋತ್ಸವ ಬಾಲಪುರಸ್ಕಾರ ವಿಜೇತನಾಗಿದ್ದಾನೆ.