ಕಾಸರಗೋಡು: ಜಿಲ್ಲೆಗೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಕೇಂದ್ರ(ಎಐಐಎಂಎಸ್)ಮಂಜೂರುಗೊಳಿಸುವಂತೆ ಆಗ್ರಹಿಸಿ ಖ್ಯಾತ ಸಾಮಾಜಿಕ ಹೋರಾಟಗಾರ್ತಿ ದಯಾಬಾಯಿ ಅವರ ನಗದು ಹಾಗೂ ಡೈರಿ ಒಳಗೊಂಡ ಬ್ಯಾಗನ್ನು ತಿರುವನಂತಪುರದ ಅನಿರ್ಧಿಷ್ಟಾವಧಿ ನಿರಾಹಾರ ಮುಷ್ಕರದ ಮಧ್ಯೆ ಕಳವುಗೈದಿರುವ ಬಗ್ಗೆ ಅಲ್ಲಿನ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿರಾಹಾರ ಸತ್ಯಾಗ್ರಹದ ಮಧ್ಯೆ ಅಸೌಖ್ಯಪೀಡಿತರಾದ ಇವರನ್ನು ಆಸ್ಪತ್ರೆಗೆ ದಾಖಲಿಸಿದ ಅ. 12ರಂದು ಕಳವು ನಡೆದಿದೆ. ಮುಖಂಡರೊಂದಿಗೆ ಮಾತುಕತೆ, ಚರ್ಚೆ ಹಿನ್ನೆಲೆಯಲ್ಲಿ ದೂರು ನೀಡುವಲ್ಲಿ ವಿಳಂಬವಾಗಿರುವುದಾಗಿ ದಯಾಭಾಯಿ ತಿಳಿಸಿದ್ದಾರೆ.
ಬ್ಯಾಗಿನಲ್ಲಿ 70ಸಾವಿರ ರೂ. ನಗದು, ಪ್ರಧಾನ ಮೊಬೈಲ್ ಸಂಖ್ಯೆಗಳು ಸೇರಿದಂತೆ ಪ್ರಮುಖ ಮಾಹಿತಿ ಒಳಗೊಂಡ ಡೈರಿ ಒಳಗೊಂಡಿತ್ತು. ಕಾಸರಗೋಡು ಜಿಲ್ಲೆಯ ಜನತೆಗಾಗಿ ಜೀವ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ದಯಾಭಾಯಿ, ಹಣಕ್ಕಿಂತಲೂ ಮಿಗಿಲಾಗಿ ಅಮೂಲ್ಯ ದಾಖಲೆಗಳನ್ನು ಒಳಗೊಂಡ ಡೈರಿ ಕಳೆದುಕೊಂಡಿರುವ ಬಗ್ಗೆ ತಮ್ಮ ದು:ಖ ವ್ಯಕ್ತಪಡಿಸಿದ್ದಾರೆ. ಸತ್ಯಾಗ್ರಹ ಸ್ಥಳದಲ್ಲಿ ಪೊಲೀಸರು ತನ್ನ ಸಾಮಗ್ರಿಗಳಿಗೆ ಸಂರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ಸಮಿತಿ ಆಗ್ರಹ:
ಕಾಸರಗೋಡಿನ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಸಂಕಷ್ಟಗಳಿಗೆ ನಿರಂತರ ಧ್ವನಿಯಾಗುತ್ತಿರುವ ದಯಾಭಾಯಿ ಅವರ ಕಳವಾಗಿರುವ ನಗದು ಹಾಗೂ ಅಮೂಲ್ಯ ದಾಖಲೆ ಹೊಂದಿದ ಡೈರಿ ಪತ್ತೆಹಚ್ಚಿಕೊಡುವಂತೆ ಕಾಸರಗೋಡು ಜಿಲ್ಲೆಯ ಮುಷ್ಕರ ಸಮಿತಿ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹೆಚ್ಚಿನ ಪೊಲೀಸ್ ಸಂರಕ್ಷಣೆ ಹೊಂದಿರುವ, ಸಿಸಿ ಕ್ಯಾಮರಾ ಒಳಗೊಂಡ ಪ್ರದೇಶದಿಂದ ಕಳವಾಗಿರುವ ನಗದು ಹಾಗೂ ದಾಖಲೆ ಒಳಗೊಂಡ ಬ್ಯಾಗನ್ನು ಪತ್ತೆಹಚ್ಚುವುದು ಪೊಲೀಸರಿಗೆ ಕಷ್ಟದ ಕೆಲಸವಾಗದು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ದಯಾಭಾಯಿ ಅವರಿಗೆ ನ್ಯಾಯ ಒದಗಿಸಿಕೊಡುವಂತೆ ಅಂಬಲತ್ತರ ಕುಞÂಕೃಷ್ಣನ್, ಸುಬೈರ್ ಪಡ್ಪು ಹಾಗೂ ಇತರ ಪದಾಧಿಕಾರಿಗಳು ಮನವಿ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾಮಾಜಿಕ ಹೋರಾಟಗಾರ್ತಿ ದಯಾಭಾಯಿ ಅವರ ಬ್ಯಾಗ್ ಕಳವು-ಪತ್ತೆ ಹಚ್ಚುವಂತೆ ಸರ್ಕಾರಕ್ಕೆ ಆಗ್ರಹ
0
ಡಿಸೆಂಬರ್ 09, 2022
Tags