ನವದೆಹಲಿ: ಮೊಟಾರು ವಾಹನ ಕಾಯ್ದೆ ಅಡಿಯಲ್ಲಿ ವಿಮೆ ಪರಿಹಾರ ಪ್ರಕ್ರಿಯೆಯನ್ನು ತ್ವರಿತವಾಗಿಸಲು ಹಲವು ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿದೆ.
'ವಾಹನ ಅಪಘಾತ ವಿಮೆ ಪರಿಹಾರ ಪ್ರಕರಣವನ್ನು ತನಿಖೆ ಮಾಡಲು ಹಾಗೂ ಪರಿಹಾರ ಪಡೆದುಕೊಳ್ಳಲು ನೆರವಾಗಲು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ವಿಶೇಷ ವಿಭಾಗವನ್ನು ರೂಪಿಸಬೇಕು.
ಮೂರು ತಿಂಗಳ ಒಳಗಾಗಿ ರಸ್ತೆ ಅಪಘಾತದ ಮಾಹಿತಿಯನ್ನು ಪೊಲೀಸರು ವಿಮೆ ಪರಿಹಾರ ನ್ಯಾಯಮಂಡಳಿಗೆ ನೀಡಬೇಕು' ಎಂದು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ವಿಮೆ ಪ್ರಕರಣಗಳ ತನಿಖೆ ಮಾಡುವ ಸಂಬಂಧ ತರಬೇತಿ ಹೊಂದಿದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆಯೂ ನ್ಯಾಯಾಲಯ ಹೇಳಿದೆ.
'ಗೃಹ ಇಲಾಖೆಯ ಮುಖ್ಯಸ್ಥ ಹಾಗೂ ಪೊಲೀಸ್ ಮಹಾನಿರ್ದೇಶಕರು ಈ ವಿಶೇಷ ವಿಭಾಗದ ಕಾರ್ಯಚಟುವಟಿಕೆಯ ಬಗ್ಗೆ ನಿಗಾ ವಹಿಸಬೇಕು. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಅಥವಾ ತಾಲ್ಲೂಕು ಮಟ್ಟದಲ್ಲಿ ಈ ವಿಶೇಷ ವಿಭಾಗವನ್ನು ಸ್ಥಾಪಿಸಬೇಕು' ಎಂದು ನ್ಯಾಯಮೂರ್ತಿಗಳಾದ ಎಸ್.ಎ. ನಜೀರ್ ಹಾಗೂ ಜೆ.ಕೆ. ಮಾಹೇಶ್ವರಿ ಅವರಿದ್ದ ಪೀಠವು ಹೇಳಿತು.
'ಅಪಘಾತದ ಎಫ್‌ಐಆರ್ ದಾಖಲಾದ 24 ಗಂಟೆಗಳ ಒಳಗೆ ಮೊದಲ ಅಪಘಾತ ವರದಿಯನ್ನು ವಿಮೆ ಪರಿಹಾರ ನ್ಯಾಯಮಂಡಳಿಗೆ ಸಲ್ಲಿಸಬೇಕು. ಅಪಘಾತ ಪ್ರಕರಣವನ್ನು ದಾಖಲಿಸಿಕೊಳ್ಳುವ ಅಧಿಕಾರಿಯು ಅಪಘಾತಕ್ಕೊಳಗಾದ ವಾಹನದ ನೋಂದಣಿ, ಚಾಲನಾ ಪರವಾನಗಿ, ವಾಹನದ ಯೋಗ್ಯತಾ ಪ್ರಮಾಣಪತ್ರ, ಪರ್ಮಿಟ್ ಮತ್ತು ಸಂಬಂಧಿಸಿದ ಇತರ ವಿಚಾರಗಳ ಕುರಿತು ನ್ಯಾಯಮಂಡಳಿಗೆ ವರದಿ ನೀಡಬೇಕು' ಎಂದು ನ್ಯಾಯಾಲಯ ಹೇಳಿದೆ.
* ಮೊಟಾರು ವಾಹನ ತಿದ್ದುಪಡಿ ಕಾಯ್ದೆ ಅನ್ವಯ, ಅಧಿಕಾರಿ ತಾನು ಕೈಗೊಂಡ ಕ್ರಮಗಳ ಬಗ್ಗೆ ಸಂತ್ರಸ್ತ ಅಥವಾ ಅವರ ಕಾನೂನು ಪ್ರತಿನಿಧಿ, ಚಾಲಕ, ಮಾಲೀಕ, ವಿಮೆ ಕಂಪನಿ ಮತ್ತು ಸಂಬಂಧಪಟ್ಟ ಇತರ ಎಲ್ಲರಿಗೂ ಮಾಹಿತಿ ನೀಡಬೇಕು
* ಮೊಟಾರು ವಾಹನ ತಿದ್ದುಪಡಿ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಇರುವ ಅನುಕೂಲಗಳನ್ನು ತಿಳಿಸಲು ಜಂಟಿ ವೆಬ್ ಪೋರ್ಟಲ್ ಅಥವಾ ವೆಬ್ ವೇದಿಕೆಯನ್ನು ಸ್ಥಾಪಿಸಬೇಕು
24 ವರ್ಷದ ಯುವಕ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಯುವಕನ ಪರ ವಕೀಲರು ವಿಮೆ ಪರಿಹಾರ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನು ಪುರಸ್ಕರಿಸಿದ್ದ ನ್ಯಾಯಮಂಡಳಿಯು ₹31.9 ಲಕ್ಷ ಪರಿಹಾರ ನೀಡಲು ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಇಲ್ಲಿ ಅರ್ಜಿಯಲ್ಲಿ ತಿಸ್ಕರಿಸಲಾಯಿತು. ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
'ಅರ್ಜಿ ವರ್ಗಾವಣೆ ಬೇಕಿಲ್ಲ'
ಅಪಘಾತವೊಂದರ ಎಲ್ಲಾ ವಿಮೆ ಪರಿಹಾರ ಅರ್ಜಿಗಳನ್ನು ವಿಮೆ ಪರಿಹಾರ ನ್ಯಾಯಮಂಡಳಿಯೇ ವಿಚಾರಣೆ ನಡೆಸಬೇಕು. ವಿಮೆ ಪರಿಹಾರಕ್ಕೆ ಒಂದಕ್ಕಿಂತ ಹೆಚ್ಚು ಅರ್ಜಿಗಳು ಬೇರೆ ಬೇರೆ ನ್ಯಾಯಾಲಯಗಳಲ್ಲಿ ಸಲ್ಲಿಕೆ ಆಗಿದ್ದರೆ, ಮೊದಲು ಯಾವ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಕೆಯಾಗಿದೆಯೇ ಅದೇ ನ್ಯಾಯಮಂಡಳಿಗೆ ಇತರ ಎಲ್ಲ ಅರ್ಜಿಗಳನ್ನು ವರ್ಗಾಯಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ಅರ್ಜಿ ವರ್ಗಾವಣೆಗಾಗಿ ಯಾವುದೇ ಅರ್ಜಿದಾರರು ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಬೇಕಾಗಿಲ್ಲ' ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.