ನವದೆಹಲಿ: ಕರ್ತವ್ಯಲೋಪ ಆರೋಪದ ಮೇಲೆ ಹಿರಿಯ ಐಪಿಎಸ್ ಅಧಿಕಾರಿ ಮತ್ತು ತಿಹಾರ್ ಜೈಲಿನ ಮಾಜಿ ಮಹಾನಿರ್ದೇಶಕ ಸಂದೀಪ್ ಗೋಯೆಲ್ ಅವರನ್ನು ಕೇಂದ್ರ ಗೃಹ ಸಚಿವಾಲಯ ಅಮಾನತುಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸಂದೀಪ್ ಅವರನ್ನು ಕಳೆದ ತಿಂಗಳು ತಿಹಾರ್ ಜೈಲಿನ ಮಹಾನಿರ್ದೇಶಕ ಸ್ಥಾನದಿಂದ ತೆರವುಗೊಳಿಸಿ ದೆಹಲಿಯ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾಯಿಸಲಾಗಿತ್ತು.
ಸದ್ಯ, ತಿಹಾರ್ ಜೈಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಕರ್ತವ್ಯದಲ್ಲಿ ಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ಗೃಹಸಚಿವರು ಅವರನ್ನು ಅಮಾನತುಗೊಳಿಸಿದ್ದಾರೆ. ಆದರೆ, ಆದೇಶದಲ್ಲಿ ಕಾರಣವನ್ನು ಸ್ಪಷ್ಟವಾಗಿ ನಮೂದಿಸಿಲ್ಲ.
₹ 200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡೋಲಿ ಜೈಲಿನಲ್ಲಿ ಬಂಧಿತನಾಗಿರುವ ಆರೋಪಿ ಸುಕೇಶ್ ಚಂದ್ರಶೇಖರ್, ಜೈಲಿನಲ್ಲಿ ತನ್ನ ಸುರಕ್ಷತೆ ಕಾಯ್ದುಕೊಳ್ಳುವುದಕ್ಕಾಗಿ ಗೋಯೆಲ್ ಅವರಿಗೆ ₹ 12.5 ಕೋಟಿ ಪಾವತಿಸಿದ್ದೇನೆ ಎಂದು ಅಕ್ಟೋಬರ್ 7ರಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಗೋಯೆಲ್ ಅವರನ್ನು ತಿಹಾರ್ ಜೈಲಿನ ಮಹಾನಿರ್ದೇಶಕ ಸ್ಥಾನದಿಂದ ತೆರವುಗೊಳಿಸಲಾಗಿತ್ತು.