ಮೇಘಾಲಯ: ಡ್ರೋನ್ ಗಳ ಮೂಲಕ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಪರಿಕಲ್ಪನೆ ಹೊಸತು. ಈಗ ಈ ಹೊಸತನ್ನು ಅಳವಡಿಸಿಕೊಂಡಿರುವ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮೇಘಾಲಯ ಪಾತ್ರವಾಗಿದೆ.
ಸ್ಥಳೀಯ ಫಾರ್ಮಸಿಯೊಂದಕ್ಕೆ ಮಾನವ ರಹಿತ ವಾಹನ ಔಷಧಗಳನ್ನು 68 ಕಿ.ಮೀ ದೂರದ ಪ್ರದೇಶದಿಂದ ತಂದು ತಲುಪಿಸಿದೆ.
ಚೆಸ್ರಾಂಗ್ ಮೊಮಿನ್ ಎಂಬಾತ ಇದರ ಪ್ರಯೋಜನ ಪಡೆದಿದ್ದು, ತನ್ನ ತಂದೆಯ ಬಿಪಿ ಮಾತ್ರೆಗಳನ್ನು ತರುವುದಕ್ಕೆ 101 ಕಿ.ಮೀ ಪ್ರಯಾಣಿಸುವ ತಾಪತ್ರಯ ತಪ್ಪಿದೆ.
ಜೆಂಗ್ಜಾಲ್ ಉಪವಿಭಾಗದ ಆಸ್ಪತ್ರೆಯ ಡ್ರೋನ್ ನಿಲ್ದಾಣ ಗಾರೋ ಹಿಲ್ಸ್ ನ ಅತ್ಯಂತ ಕುಗ್ರಾಮಕ್ಕೂ ಅಗತ್ಯ ವಸ್ತುಳು ತಲುಪುವುದನ್ನು ಖಾತ್ರಿಪಡಿಸಿಕೊಂಡಿದೆ.
ಸರ್ಕಾರಿ ಆರೋಗ್ಯ ಪೂರೈಕೆ ಸರಪಳಿಗೆ ಇಲ್ಲಿನ ಭೂಕುಸಿತ, ಪ್ರವಾಹಗಳ ಕಾರಣದಿಂದಾಗಿ ಲಾಜಿಸ್ಟಿಕ್ ಸಮಸ್ಯೆಗಳಿವೆ. ಆದ್ದರಿಂದ ಆರೋಗ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಆರೋಗ್ಯ ಕೇಂದ್ರಗಳಿಗೆ ತಲುಪಿಸುವುದು ಸವಾಲಿನ ಸಂಗತಿ.
ವಿಶ್ವಬ್ಯಾಂಕ್ ನಿಂದ ಆರ್ಥಿಕ ನೆರವು ಪಡೆದು ಚಾಲ್ತಿಯಲ್ಲಿರುವ ಡ್ರೋಣ್ ಸೇವೆಗಳು ಮೇಘಾಲಯ ಆರೋಗ್ಯ ವ್ಯವಸ್ಥೆ ಸದೃಢ ಯೋಜನೆ ಹಾಗೂ ಸ್ಟಾರ್ಟ್ ಅಪ್ ಟೆಕ್ಕೀಗಲ್ ಎಂಬ ಜಂಟಿ ಸಹಯೋಗದ್ದಾಗಿದ್ದು, ಟೆಕ್ಕೀಗಲ್ ನ ಸಹ ಸಂಸ್ಥಾಪಕ ಅಂಶು ಅಭಿಷೇಕ್ ಇದು ಏಷ್ಯಾದ ಮೊದಲ, ಆರೋಗ್ಯ ವಿತರಣಾ ವ್ಯವಸ್ಥೆಯಗಾಗಿಯೇ ಇರುವ ಡ್ರೋಣ್ ಸ್ಟೇಷನ್ ಆಗಿದೆ ಎನ್ನುತ್ತಾರೆ.
ಡ್ರೋನ್ ಸಾಗಬೇಕಿರುವ ಮಾರ್ಗವನ್ನು ಜಿಪಿಎಸ್ ಆಧಾರದಲ್ಲಿ ಮೊದಲೇ ನಿಗದಿಪಡಿಸಲಾಗಿರುತ್ತದೆ.ಈ ಡ್ರೋನ್ ಗೆ 3-5 ಕೆಜಿಯಷ್ಟು ಸರಕುಗಳನ್ನು ಹೊತ್ತು ಸಾಗುವ ಸಾಮರ್ಥ್ಯವಿದೆ. ಲಸಿಕೆಗಳನ್ನು ಕೊಂಡೊಯ್ಯುವುದಕ್ಕಾಗಿಯೇ ಎರಡು ಪ್ರತ್ಯೇಕ ಡ್ರೋನ್ ಗಳಿದ್ದು ಅವುಗಳಿಗೆ 20-25 ಕೆ.ಜಿ ಕೊಂಡೊಯ್ಯುವ ಸಾಮರ್ಥ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಮ್ ಕುಮಾರ್ ಹೇಳಿದ್ದಾರೆ.