ನವದೆಹಲಿ: ಭಾರತೀಯ ರೈಲ್ವೆಯ ಎಂಜಿನಿಯರಿಂಗ್ ವಿಭಾಗವು ಕಾಲ ಕಾಲಕ್ಕೆ ರೈಲು ಮಾರ್ಗಗಳಲ್ಲಿ ಹಳಿಗಳ ನಿರ್ವಹಣೆ ಮಾಡದಿರುವುದೇ ರೈಲುಗಳು ಹಳಿತಪ್ಪುವ ಘಟನೆಗಳು ಸಂಭವಿಸಲು ಪ್ರಮುಖ ಕಾರಣ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.
ರೈಲು ಹಳಿಗಳ ಸಮಯೋಚಿತ ನಿರ್ವಹಣಾ ಕೆಲಸಗಳಿಗೆ ಮತ್ತು ಪ್ರಬಲ ಮೇಲ್ವಿಚಾರಣೆಗೆ ಸುಧಾರಿತ ತಂತ್ರಜ್ಞಾನಗಳು ಹಾಗೂ ಸಂಪೂರ್ಣ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಭಾರತೀಯ ರೈಲ್ವೆಗೆ ಸಿಎಜಿ ಸೂಚನೆ ನೀಡಿದೆ.
ಭಾರತೀಯ ರೈಲ್ವೆಯ 2017-18ರಿಂದ 2020-21ರ ಅವಧಿಯ ಕಾರ್ಯಕ್ಷಮತೆ ಕುರಿತು ಸಿದ್ಧಪಡಿಸಿರುವ 'ಭಾರತೀಯ ರೈಲ್ವೆಯಲ್ಲಿ ಹಳಿ ತಪ್ಪುವಿಕೆ' ವರದಿಯಲ್ಲಿ ಸಿಎಜಿ, ಹಳಿಗಳ ಕಳಪೆ ನಿರ್ವಹಣೆ, ಅತೀ ವೇಗ ಹಾಗೂ ತಾಂತ್ರಿಕ ವೈಫಲ್ಯಗಳು ರೈಲುಗಳು ಹಳಿ ತಪ್ಪಲು ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದೆ.
ಹಳಿ ತಪ್ಪುವಿಕೆಯ ಒಟ್ಟು 422 ಪ್ರಕರಣಗಳು ಸಂಭವಿಸಿದ್ದು, ಇದಕ್ಕೆ ಎಂಜಿನಿಯರಿಂಗ್ ವಿಭಾಗ ಹೊಣೆಯಾಗಿದೆ. ಇದರಲ್ಲಿ 171 ಪ್ರಕರಣಗಳು ಹಳಿಗಳ ನಿರ್ವಹಣೆಗೆ ಸಂಬಂಧಿಸಿದವು. ಇನ್ನು 156 ಪ್ರಕರಣಗಳು ಅನುಮತಿಸಿದ ಮಾನದಂಡ ಮೀರಿದ ಪರಿಣಾಮ ಸಂಭವಿಸಿದಂತವು ಆಗಿವೆ ಎಂದು ವರದಿಯಲ್ಲಿ ಹೇಳಿದೆ.
ಅಲ್ಲದೇ, ರೈಲ್ವೆಯ ಆದ್ಯತಾ ಕಾಮಗಾರಿಗಳಿಗೆ ವರ್ಷದಿಂದ ವರ್ಷಕ್ಕೆ ಅನುದಾನ ಕಡಿತ ಮಾಡುತ್ತಿರುವ ಪ್ರವೃತ್ತಿ ಮುಂದುವರಿದಿರುವುದನ್ನು ಸಿಎಜಿ ವರದಿಯಲ್ಲಿ ಬೊಟ್ಟು ಮಾಡಿದೆ.